ತಿರುವನಂತಪುರಂ: ಫಾರ್ಮ್‍ಫೆಡ್ (ಸದರ್ನ್ ಗ್ರೀನ್ ಫಾರ್ಮಿಂಗ್ ಅಂಡ್ ಮಾರ್ಕೆಟಿಂಗ್ ಮಲ್ಟಿ-ಸ್ಟೇಟ್ ಕೋಆಪರೇಟಿವ್ ಸೊಸೈಟಿ ಲಿಮಿಟೆಡ್) ಸಂಸ್ಥೆಯ ವಿವಿಧ ಶಾಖೆಗಳ ವಿರುದ್ಧ 250 ಕೋಟಿ ರೂ.ಗಳ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲೀಸರು ತನಿಖೆ ನಡೆಸಲು ಸಿದ್ಧತೆ ನಡೆಸಿದ್ದಾರೆ. ರಾಜ್ಯಾದ್ಯಂತ ಹಲವಾರು ಜನರಿಂದ 250 ಕೋಟಿ ರೂ.ವಂಚಿಸಲಾಗಿದೆ.
14 ಜಿಲ್ಲೆಗಳಲ್ಲಿ ಹರಡಿರುವ 16 ಶಾಖೆಗಳಲ್ಲಿ ಪೋಲೀಸರು ತನಿಖೆ ನಡೆಸಲಿದ್ದಾರೆ. ಇದಕ್ಕಾಗಿ ವಿಶೇಷ ತಂಡ ರಚಿಸಲಾಗುವುದು ಎಂದು ಮ್ಯೂಸಿಯಂ ಪೋಲೀಸರು ತಿಳಿಸಿದ್ದಾರೆ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಪನಿಯ ಅಧ್ಯಕ್ಷ ರಾಜೇಶ್ ಮತ್ತು ಎಂಡಿ ಅಖಿನ್ ಫ್ರಾನ್ಸಿಸ್ ಅವರನ್ನು ಪೋಲೀಸರು ತ್ರಿಶೂರ್‍ನಲ್ಲಿ ಮೊನ್ನೆ ಬಂಧಿಸಿದ್ದರು. ಈ ಜನರು ಸೇರಿದಂತೆ ನಿರ್ದೇಶಕರ ಮಂಡಳಿಯಲ್ಲಿ 7 ಜನರಿದ್ದಾರೆ. ಪೋಲೀಸರು ಅವರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಿದ್ದಾರೆ. ವಿವರವಾದ ತನಿಖೆ ಮೊದಲು ಸಾಸ್ತಮಂಗಲದಲ್ಲಿರುವ ಫಾರ್ಮ್‍ಫೆಡ್ ಕಚೇರಿಯಲ್ಲಿ ಪ್ರಾರಂಭವಾಗುತ್ತದೆ. ಸಂಸ್ಥೆಗಳಲ್ಲಿ ಲ್ಯಾಪ್‍ಟಾಪ್‍ಗಳು, ಪೆನ್‍ಡ್ರೈವ್‍ಗಳು, ಕಂಪ್ಯೂಟರ್ ಡಿಸ್ಕ್‍ಗಳು ಇತ್ಯಾದಿಗಳನ್ನು ತಪಾಸಣೆಗೆ ಒಳಪಡಿಸಲಾಗುತ್ತದೆ. ಹೆಚ್ಚಿನ ಜನರು ದೂರು ನೀಡಲು ಮುಂದೆ ಬರುವ ವಿಶ್ವಾಸವಿದೆ ಎಂದು ಪೋಲೀಸರು ತಿಳಿಸಿದ್ದಾರೆ.
ಅನೇಕ ಜನರು ಸಂಸ್ಥೆಯಲ್ಲಿ ಒಂದು ವರ್ಷದವರೆಗೆ ಲಕ್ಷಾಂತರ ರೂಪಾಯಿಗಳ ಸ್ಥಿರ ಠೇವಣಿಗಳನ್ನು ಇರಿಸಿರುವರು. 12.5 ಪ್ರತಿಶತದಷ್ಟು ಆಕರ್ಷಕ ಬಡ್ಡಿದರದ ಭರವಸೆ ನೀಡಿದ ಹಿನ್ನೆಲೆಯಲ್ಲಿ ಭಾರೀ ಜನಬೆಂಬಲ ವ್ಯಕ್ತವಾಗಿತ್ತು. ಮೊದಲ ಬಾರಿಗೆ ಹಣ ಮತ್ತು ಬಡ್ಡಿಯನ್ನು ಸರಿಯಾಗಿ ಹಿಂದಿರುಗಿಸಿದ್ದರಿಂದ ಹೆಚ್ಚಿನ ಜನರು ಅದರತ್ತ ಆಕರ್ಷಿತರಾದರು. ಕಂಪನಿಯು 2009 ರಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದರೂ, ತಿರುವನಂತಪುರದ ಸಾಸ್ತಮಂಗಲಂನಲ್ಲಿರುವ ಶಾಖೆಯನ್ನು ಮೂರು ವರ್ಷಗಳ ಹಿಂದೆ ತೆರೆಯಲಾಯಿತು. ಆರೋಪಿಗಳು ಆರಂಭದಿಂದಲೂ ಸಣ್ಣ ಪ್ರಮಾಣದಲ್ಲಿ ವಂಚನೆ ಮಾಡುತ್ತಿದ್ದರು ಎಂಬ ಸೂಚನೆಗಳು ಪೋಲೀಸರಿಗೆ ಲಭಿಸಿದ್ದವು. ಕದ್ದ ಕೋಟಿಗಳನ್ನು ರಿಯಲ್ ಎಸ್ಟೇಟ್ ಸಂಸ್ಥೆಗಳು ಮತ್ತು ಯೂಟ್ಯೂಬ್ ಚಾನೆಲ್‍ನಲ್ಲಿ ಹೂಡಿಕೆ ಮಾಡಲಾಗಿದೆ ಎಂದು ಆರಂಭದಲ್ಲಿ ತಿಳಿದುಬಂದಿದೆ. ಇದರಲ್ಲಿ ವ್ಯಕ್ತಿಗಳಿಗೆ ಪಾವತಿಸುವ ಮೊತ್ತವೂ ಸೇರಿದೆ. ಆರೋಪಿಗಳು ಹೊಸ ಕಂಪನಿಯನ್ನು ಪ್ರಾರಂಭಿಸುವ ಯೋಜನೆಯನ್ನು ಹೊಂದಿದ್ದರು ಮತ್ತು ಆ ಉದ್ದೇಶಕ್ಕಾಗಿ ವಂಚನೆಯ ಹಣವನ್ನು ಬಳಸಿದ್ದರು ಎಂದು ಸೂಚಿಸಲಾಗಿದೆ.






