ಹಿಸಾರ್: ಬೇಹುಗಾರಿಕೆ ಪ್ರಕರಣದಲ್ಲಿ ಬಂಧಿತರಾಗಿರುವ ಹರಿಯಾಣದ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ಅವರ ಪೊಲೀಸ್ ಕಸ್ಟಡಿ ಅವಧಿಯನ್ನು ನಾಲ್ಕು ದಿನಗಳವರೆಗೆ ವಿಸ್ತರಿಸಿ ಇಲ್ಲಿನ ನ್ಯಾಯಾಲಯ ಆದೇಶ ಹೊರಡಿಸಿದೆ.
5 ದಿನಗಳ ಪೊಲೀಸ್ ಕಸ್ಟಡಿ ಮುಕ್ತಾಯವಾದ ಕಾರಣ ಜ್ಯೋತಿ ಅವರನ್ನು ಗುರುವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ಬೇಹುಗಾರಿಕೆ ಆರೋಪಕ್ಕೆ ಸಂಬಂಧಿಸಿ ಕಳೆದ ಎರಡು ವಾರಗಳಲ್ಲಿ ಜ್ಯೋತಿ ಸೇರಿದಂತೆ ಪಂಜಾಬ್, ಉತ್ತರ ಪ್ರದೇಶ ಮತ್ತು ಹರಿಯಾಣದಲ್ಲಿ ಒಟ್ಟು 12 ಜನರನ್ನು ಬಂಧಿಸಲಾಗಿದೆ.
ಪಾಕಿಸ್ತಾನದೊಂದಿಗೆ ಸಂಪರ್ಕ ಹೊಂದಿರುವ ಬೇಹುಗಾರಿಕೆ ಜಾಲವು ಉತ್ತರ ಭಾರತದಲ್ಲಿ ಇರುವ ಕುರಿತು ಹಾಗೂ ಭಾರತೀಯ ಸೇನೆಗೆ ಸಂಬಂಧಿಸಿದ ಮಾಹಿತಿಗಳನ್ನು ಅಲ್ಲಿನ ಅಧಿಕಾರಗಳೊಂದಿಗೆ ಬಂಧಿತರು ಹಂಚಿಕೊಂಡಿರುವ ಬಗ್ಗೆ ತನಿಖಾಧಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.
ಭಾರತೀಯ ಸೇನೆ ಕುರಿತು ಜ್ಯೋತಿ ಅವರಿಗೆ ಮಾಹಿತಿ ಲಭ್ಯವಿತ್ತು ಎಂಬುದಕ್ಕೆ ಸದ್ಯ ಪುರಾವೆಗಳು ದೊರೆತಿಲ್ಲ. ಆದರೆ, ಪಾಕಿಸ್ತಾನದ ಗುಪ್ತಚರ ಸಂಸ್ಥೆಯಲ್ಲಿರುವವರು ಎಂದು ತಿಳಿದಿದ್ದರೂ ಕೆಲವರೊಂದಿಗೆ ಜ್ಯೋತಿ ಸಂಪರ್ಕದಲ್ಲಿದ್ದರು.
ಪಾಕಿಸ್ತಾನದ ರಾಯಭಾರ ಕಚೇರಿಯ ಡ್ಯಾನಿಶ್ ಅವರೊಂದಿಗೆ 2023ರಿಂದ ಸಂಪರ್ಕದಲ್ಲಿದ್ದಾರೆ ಎಂದು ಹಿಸಾರ್ ಪೊಲೀಸರು ಬುಧವಾರ ತಿಳಿಸಿದರು.
ಬೇಹುಗಾರಿಕೆಯಲ್ಲಿ ತೊಡಗಿದ ಆರೋಪದ ಮೇಲೆ ಡ್ಯಾನಿಶ್ ಅವರನ್ನು ಮೇ 13ರಂದು ಭಾರತವು ಹೊರಹಾಕಿತ್ತು.
ಜ್ಯೋತಿ ಅವರ ಮೂರು ಮೊಬೈಲ್ ಫೋನ್ ಹಾಗೂ ಒಂದು ಲ್ಯಾಪ್‌ಟಾಪ್ ಅನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಅವರ ನಾಲ್ಕು ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಲಾಗುತ್ತಿದೆ.
ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಗುಪ್ತಚರ ದಳ ಹಾಗೂ ಸೇನೆಯ ಗುಪ್ತಚರ ಅಧಿಕಾರಿಗಳು ಜ್ಯೋತಿ ಅವರ ವಿಚಾರಣೆ ನಡೆಸಿದ್ದಾರೆ.
ಜ್ಯೋತಿ ಅವರು ಪಾಕಿಸ್ತಾನ, ಚೀನಾ, ಬಾಂಗ್ಲಾದೇಶ ಹಾಗೂ ಇತರ ಕೆಲ ದೇಶಗಳಿಗೆ ಭೇಟಿ ನೀಡಿರುವುದು ವಿಚಾರಣೆಯಿಂದ ತಿಳಿದು ಬಂದಿದೆ. ಪಾಕಿಸ್ತಾನ ಗುಪ್ತಚರ ದಳವು ಜ್ಯೋತಿ ಅವರನ್ನು ಮಾಹಿತಿದಾರರನ್ನಾಗಿ ಬಳಸಿಕೊಳ್ಳುತ್ತಿದೆ ಎನ್ನಲಾಗಿದೆ.
ಪೆಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿ ಬಳಿಕ ಭಾರತ - ಪಾಕಿಸ್ತಾನಗಳ ನಡುವಿನ ನಾಲ್ಕು ದಿನಗಳ ಸೇನಾ ಸಂಘರ್ಷದ ಸಮಯದಲ್ಲೂ ಜ್ಯೋತಿ ಅವರು ಡ್ಯಾನಿಶ್ ಅವರೊಂದಿಗೆ ಸಂಪರ್ಕದಲ್ಲಿದ್ದರು ಎನ್ನಲಾಗಿದೆ.




