ತಿರುವನಂತಪುರಂ: ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ಜಿ.ಆರ್. ಅನಿಲ್ ಅವರು ಮನೆ ಬಾಗಿಲಿಗೆ ಪಡಿತರ ವಿತರಕರಿಗೆ ಬಾಕಿ ಪಾವತಿಸಲು 50 ಕೋಟಿ ರೂ.ವನ್ನು ರಾಜ್ಯ ಸರ್ಕಾರ ಹೆಚ್ಚುವರಿಯಾಗಿ ಮಂಜೂರು ಮಾಡಿದೆ ಎಂದು ತಿಳಿಸಿರುವರು. ಈ ಮೊತ್ತವನ್ನು ತಕ್ಷಣವೇ ವಿತರಿಸಲಾಗುವುದು ಎಂದು ಸಚಿವರು ತಿಳಿಸಿದ್ದು, ರಾಜ್ಯದಲ್ಲಿ ಪಡಿತರ ವಿತರಣೆಯಲ್ಲಿ ಯಾವುದೇ ಬಿಕ್ಕಟ್ಟು ಇಲ್ಲ ಎಂದಿರುವರು.
ಸಾರಿಗೆ ಗುತ್ತಿಗೆದಾರರ ಮುಷ್ಕರದಿಂದಾಗಿ ರಾಜ್ಯವು ಪಡಿತರ ವಿತರಣೆಯಲ್ಲಿ ಬಿಕ್ಕಟ್ಟನ್ನು ಎದುರಿಸುತ್ತಿದೆ ಎಂಬ ಮಾಧ್ಯಮ ವರದಿಗಳು ಆಧಾರರಹಿತವಾಗಿವೆ ಎಂದು ಸಚಿವರು ಹೇಳಿದರು.
ಸಾರಿಗೆ ಗುತ್ತಿಗೆದಾರರು ಸಾಮಾನ್ಯವಾಗಿ ಒಂದು ಅಥವಾ ಎರಡು ತಿಂಗಳವರೆಗೆ ಬಾಕಿ ಉಳಿಸಿಕೊಳ್ಳುತ್ತಾರೆ. ಇಂದು ಅಗತ್ಯವಿರುವ ಮೊತ್ತವನ್ನು (50 ಕೋಟಿ ರೂ.) ಹಂಚಿಕೆ ಮಾಡಲಾಗಿದ್ದು, ವಿತರಣೆ ಆರಂಭವಾಗಿದೆ.
ಪಡಿತರ ಅಂಗಡಿಗಳಲ್ಲಿ ಒಂದೂವರೆ ತಿಂಗಳಿಗೆ ಸಾಕಾಗುವಷ್ಟು ದಾಸ್ತಾನು ಇರುವುದರಿಂದ, ಮುಷ್ಕರಗಳು ವಿತರಣೆಯ ಮೇಲೆ ಪರಿಣಾಮ ಬೀರುವುದಿಲ್ಲ. ಪೋರ್ಟಬಿಲಿಟಿ ವೈಶಿಷ್ಟ್ಯದಿಂದಾಗಿ, ಗ್ರಾಹಕರು ತಮ್ಮ ಪಡಿತರ ಹಂಚಿಕೆಯನ್ನು ಯಾವುದೇ ಅಂಗಡಿಯಿಂದ ಪಡೆಯಬಹುದು. ಇಲ್ಲಿಯವರೆಗೆ, ಈ ಕ್ಷೇತ್ರದಲ್ಲಿ ಯಾವುದೇ ಗಂಭೀರ ಬಿಕ್ಕಟ್ಟು ಉಂಟಾಗಿಲ್ಲ. ಆದರೆ, ರಾಜ್ಯದಲ್ಲಿ ಪಡಿತರ ವಿತರಣೆಯಲ್ಲಿ ಅಸ್ತವ್ಯಸ್ತತೆ ಉಂಟಾಗಿದೆ ಎಂದು ಸುಳ್ಳು ಪ್ರಚಾರ ಮಾಡುವುದು ಜನರಲ್ಲಿ ಭಯವನ್ನು ಹರಡಲು ಮಾತ್ರ ಕಾರಣವಾಗುತ್ತದೆ.
ರಾಜ್ಯ ಸರ್ಕಾರ ನಾಲ್ಕು ವರ್ಷಗಳನ್ನು ಪೂರೈಸಿ ಐದನೇ ವರ್ಷಕ್ಕೆ ಕಾಲಿಡುತ್ತಿರುವ ಈ ಸಂದರ್ಭದಲ್ಲಿ ಜನರು ಇಂತಹ ಸುಳ್ಳು ಪ್ರಚಾರವನ್ನು ಗುರುತಿಸಬೇಕು ಎಂದು ಸಚಿವರು ಅಭಿಪ್ರಾಯಪಟ್ಟರು.
ಆದರೆ ರಾಜ್ಯಾದ್ಯಂತ ಎಲ್ಲೂ ಪಡಿತರ ವಿತರಣೆ ನಿನ್ನೆ ಸಂಜೆ 6ರ ವರೆಗೂ ನಡೆಯಲಿಲ್ಲ ಎಂಬುದು ಸತ್ಯ. ಅದು ಸರ್ಕಾರ, ಸಚಿವರಿಗೆ ಅರಿವಿಲ್ಲ ಎಂದಾದರೆ ಜನರ ಸ್ಥಿತಿ ಶೋಚನೀಯ ಎಂಬುದರಲ್ಲಿ ಸಂಶಯಗಳಿಲ್ಲ.






