ನವದೆಹಲಿ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆಯು ಪಾಕಿಸ್ತಾನದ ಉಗ್ರ ಸಂಘಟನೆಗಳನ್ನು ಗುರಿಯಾಗಿಸಿಕೊಂಡು ಇಂದು (ಬುಧವಾರ) ಕ್ಷಿಪಣಿ ದಾಳಿ ನಡೆಸಿದ್ದು ಈ ಮಾಹಿತಿಯನ್ನು ಭಾರತ ಐದು ದೇಶಗಳ ಜೊತೆ ಹಂಚಿಕೊಂಡಿದೆ.
ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಾದ್ಯಂತ ಲಷ್ಕರ್-ಎ-ತಯಬಾ (ಎಲ್‌ಇಟಿ), ಜೈಶ್-ಎ-ಮೊಹಮ್ಮದ್ (ಜೆಇಎಂ) ಉಗ್ರ ಸಂಘಟನೆಗಳಿಗೆ ಸೇರಿದ 9 ನೆಲೆಗಳ ಮೇಲೆ ಭಾರತೀಯ ಸೇನೆಯು 'ಆಪರೇಷನ್ ಸಿಂಧೂರ' ಎಂಬ ಕಾರ್ಯಾಚರಣೆ ನಡೆಸಿದೆ.
ಈ ದಾಳಿಯ ಮಾಹಿತಿಯನ್ನು ಐದು ದೇಶಗಳೊಂದಿಗೆ ಭಾರತ ಹಂಚಿಕೊಂಡಿದೆ.
ಅಮೆರಿಕ, ಬ್ರಿಟನ್, ಸೌದಿ ಅರೇಬಿಯಾ, ಯುಎಇ ಮತ್ತು ರಷ್ಯಾಗಳೊಂದಿಗೆ ಮಾಹಿತಿ ಹಂಚಿಕೊಳ್ಳಲಾಗಿದೆ ಎಂದು ಭಾರತದ ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.
ಆದಾಗ್ಯೂ ಚೀನಾದೊಂದಿಗೆ ದಾಳಿಯ ಮಾಹಿತಿ ಹಂಚಿಕೊಂಡಿಲ್ಲ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಈ ಕಾರ್ಯಾಚರಣೆಯನ್ನು ಬುಧವಾರ ಬೆಳಗಿನ ಜಾವ 1.05ರಿಂದ 1.30ರವರೆಗೆ ನಡೆಸಲಾಯಿತು. ಪಹಲ್ಗಾಮ್‌ನಲ್ಲಿ ಮೃತಪಟ್ಟ ಪ್ರವಾಸಿಗರಿಗಾಗಿ ಕಾರ್ಯಾಚರಣೆ ನಡೆಸಲಾಯಿತು.
ನಾವು ಯಾವುದೇ ನಾಗರಿಕರ ಮೇಲಾಗಲಿ ಅಥವಾ ಪಾಕ್ ಮಿಲಿಟರಿಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿಲ್ಲ. ಕೇವಲ ಉಗ್ರರ ನೆಲೆಗಳನ್ನು ಮಾತ್ರ ಧ್ವಂಸಗೊಳಿಸಿದ್ದೇವೆ. ನಾಗರಿಕರಿಗೆ ಹಾನಿ ಮಾಡುವುದು, ಸಾರ್ವಜನಿಕ ಆಸ್ತಿಪಾಸ್ತಿ ಹಾಗೂ ಆರ್ಥಿಕ ನಷ್ಟ ಮಾಡುವುದು ನಮ್ಮ ಉದ್ದೇಶವಲ್ಲ, ಉಗ್ರರ ನೆಲೆಗಳನ್ನು ಧ್ವಂಸ ಮಾಡುವುದೇ ಈ ಕಾರ್ಯಾಚರಣೆಯ ಉದ್ದೇಶ ಎಂದು ಮಾಹಿತಿ ಹಂಚಿಕೊಂಡಿರುವ ದೇಶಗಳಿಗೆ ವಿವರಿಸಲಾಗಿದೆ ಎಂದು ಸರ್ಕಾರದ ವಕ್ತಾರರು ತಿಳಿಸಿದ್ದಾರೆ.
ಪಾಕಿಸ್ತಾನದ ಬಹಾವಲ್‌ಪುರದಲ್ಲಿರುವ ಜೆಇಎಂ ಪ್ರಧಾನ ಕಚೇರಿ ಮತ್ತು ಮುರಿಡ್ಕೆಯಲ್ಲಿರುವ ಎಲ್‌ಇಟಿ ಪ್ರಧಾನ ಕಚೇರಿಯ ಮೇಲೆ ದಾಳಿ ನಡೆಸಿರುವುದನ್ನು ಭದ್ರತಾ ಪಡೆಗಳು ಖಚಿತಪಡಿಸಿವೆ.




