ಜೆರುಸಲೇಂ: ವಿಸ್ತರಿತ ಮಿಲಿಟರಿ ಕಾರ್ಯಾಚರಣೆಯ ಭಾಗವಾಗಿ ಗಾಝಾ ಪಟ್ಟಿಯ 75%ದಷ್ಟು ಪ್ರದೇಶವನ್ನು ನಿಯಂತ್ರಣಕ್ಕೆ ಪಡೆಯಲು ಮತ್ತು ಅಲ್ಲಿಯ ಸುಮಾರು 2 ದಶಲಕ್ಷ ಜನರನ್ನು ಮೂರು ಗೊತ್ತುಪಡಿಸಿದ ಪ್ರದೇಶಗಳಿಗೆ ಸ್ಥಳಾಂತರಿಸಲು ಇಸ್ರೇಲ್ ಯೋಜಿಸಿದೆ ಎಂದು ಇಸ್ರೇಲ್ ಮಾಧ್ಯಮಗಳನ್ನು ಉಲ್ಲೇಖಿಸಿ ಬ್ಲೂಮ್‍ಬರ್ಗ್ ವರದಿ ಮಾಡಿದೆ.
`ಗಿಡಿಯಾನ್ಸ್ ಚಾರಿಯಟ್ಸ್' ಎಂಬ ಸಂಕೇತನಾಮದ ಕಾರ್ಯಾಚರಣೆಯು ಹಮಾಸ್ ಅನ್ನು ಸೋಲಿಸುವ ಮತ್ತು ಗಾಝಾದಲ್ಲಿ ಒತ್ತೆಸೆರೆಯಲ್ಲಿರುವ ಎಲ್ಲಾ ಒತ್ತೆಯಾಳುಗಳನ್ನು ಬಿಡುಗಡೆಗೊಳಿಸುವ ಗುರಿ ಹೊಂದಿದೆ. ಸಂಪೂರ್ಣ ಗಾಝಾವನ್ನು ಅಂತಿಮವಾಗಿ ಇಸ್ರೇಲ್ ಪಡೆಗಳು ಸ್ವಾಧೀನಪಡಿಸಿಕೊಳ್ಳುತ್ತವೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.
ವರದಿಯಾದ ಯೋಜನೆಯ ಪ್ರಕಾರ , 226 ಚದರ ಕಿ.ಮೀ ವ್ಯಾಪ್ತಿಯ ಗಾಝಾದ ಸಂಪೂರ್ಣ ಜನಸಂಖ್ಯೆಯನ್ನು ದಕ್ಷಿಣ ಗಾಝಾದ ಮವಾಸಿ ಪ್ರದೇಶ, ಮಧ್ಯ ಗಾಝಾ ಮತ್ತು ಉತ್ತರದ ಗಾಝಾ ನಗರಕ್ಕೆ ಸ್ಥಳಾಂತರಿಸಲಾಗುತ್ತದೆ. ಈಗ ಇಸ್ರೇಲ್ ಸೇನೆ ಗಾಝಾದ 40% ಪ್ರದೇಶದ ಮೇಲೆ ನಿಯಂತ್ರಣ ಸಾಧಿಸಿದೆ. ಇಸ್ರೇಲ್ ಗಾಝಾದಲ್ಲಿನ ಮಿಲಿಟರಿ ಕಾರ್ಯಾಚರಣೆಯನ್ನು ವಿಸ್ತರಿಸಿರುವಂತೆಯೇ, ಯುದ್ಧವು ಶೀಘ್ರವಾಗಿ ಕೊನೆಗೊಳ್ಳುವುದನ್ನು ನೋಡಲು ಬಯಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರವಿವಾರ ಹೇಳಿದ್ದಾರೆ. ಈ ಮಧ್ಯೆ, ಮಾರ್ಚ್ ಆರಂಭದಲ್ಲಿ ಗಾಝಾ ಪಟ್ಟಿಗೆ ಮಾನವೀಯ ನೆರವು ಪೂರೈಕೆಯನ್ನು ಇಸ್ರೇಲ್ ನಿರ್ಬಂಧಿಸಿದ ಬಳಿಕ ಅಂತರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕ ಟೀಕೆ, ಖಂಡನೆ ವ್ಯಕ್ತವಾದ ಹಿನ್ನೆಲೆಯಲ್ಲಿ ಇಸ್ರೇಲ್ ಗಾಝಾ ಪಟ್ಟಿಗೆ ತುರ್ತು ಮಾನವೀಯ ನೆರವು ವಿತರಿಸುವ ಅಮೆರಿಕ ನೆರವಿನ ಯೋಜನೆಗೆ ಇಸ್ರೇಲ್ ಚಾಲನೆ ನೀಡಿದೆ.




