ಟ್ರಿಪೋಲಿ: ಒಂದು ಗುಂಪಿನ ಪ್ರಬಲ ನಾಯಕನ ಹತ್ಯೆಯ ಬಳಿಕ ಭಾರೀ ಶಸ್ತ್ರಾಸ್ತ್ರ ಸಜ್ಜಿತ ಗುಂಪುಗಳ ನಡುವೆ ನಡೆದ ಘರ್ಷಣೆಗೆ ಲಿಬಿಯಾ ರಾಜಧಾನಿ ಟ್ರಿಪೋಲಿ ತತ್ತರಿಸಿದ್ದು ಗುಂಡಿನ ಚಕಮಕಿ ಹಾಗೂ ಸರಣಿ ಸ್ಫೋಟಗಳು ನಗರದಾದ್ಯಂತ ಕೇಳಿ ಬಂದಿವೆ. ಘರ್ಷಣೆಯಲ್ಲಿ ಕನಿಷ್ಠ 7 ಮಂದಿ ಸಾವನ್ನಪ್ಪಿದ್ದು ತುರ್ತು ಪರಿಸ್ಥಿತಿ ಘೋಷಿಸಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ಜಾವಿಯಾ, ಜಿಂಟಾನ್ ಮತ್ತು ಮಿಸುರಾಟಾ ನಗರಗಳ ಸಶಸ್ತ್ರ ಗುಂಪುಗಳು ರಾಜಧಾನಿಯತ್ತ ಸಾಗುತ್ತಿವೆ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ. ಟ್ರಿಪೋಲಿಯಲ್ಲಿ ಮಂಗಳವಾರ ಎಲ್ಲಾ ಶಾಲೆಗಳನ್ನು ಮುಚ್ಚಲು ಅಧಿಕಾರಿಗಳು ಸೂಚಿಸಿದ್ದಾರೆ. ಟ್ರಿಪೋಲಿ ವಿವಿ ಕೂಡಾ ಎಲ್ಲಾ ತರಗತಿಗಳು, ಪರೀಕ್ಷೆಗಳನ್ನು ಮುಂದೂಡಿದೆ. ಟ್ರಿಪೋಲಿಯದ ಮಿಟಿಗಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಯಾಚರಣೆಯನ್ನು ಅಮಾನತುಗೊಳಿಸಲಾಗಿದ್ದು, ವಿಮಾನ ನಿಲ್ದಾಣಕ್ಕೆ ಆಗಮಿಸುವ ವಿಮಾನಗಳನ್ನು ಸುಮಾರು 250 ಕಿ.ಮೀ ದೂರದ ಮಿಸುರಟ ನಿಲ್ದಾಣಕ್ಕೆ ತಿರುಗಿಸಲಾಗಿದೆ. ರಾಜಧಾನಿಯ ಅನೇಕ ಪ್ರದೇಶಗಳಲ್ಲಿ ಭಾರೀ ಘರ್ಷಣೆಗಳು ಮತ್ತು ಸ್ಫೋಟ ನಡೆದಿದ್ದು ಸಶಸ್ತ್ರ ಹೋರಾಟಗಾರರು ಇರುವ ಹಲವಾರು ವಾಹನಗಳು ರಸ್ತೆಯಲ್ಲಿ ಸಂಚರಿಸುತ್ತಿವೆ ಎಂದು ನಿವಾಸಿಗಳು ವರದಿ ಮಾಡಿದ್ದಾರೆ
ಸಶಸ್ತ್ರ ಹೋರಾಟಗಾರರ ಗುಂಪು `ಸ್ಟೆಬಿಲೈಸೇಷನ್ ಸಪೋರ್ಟ್ ಅಥಾರಿಟಿ(ಎಸ್‍ಎಸ್‍ಎ)' ಯ ಕಮಾಂಡರ್ ಅಬ್ದುಲ್ ಘನಿ ಅಲ್-ಕಿಕ್ಲಿಯನ್ನು ವಿರೋಧಿ ಗುಂಪು ಹತ್ಯೆ ಮಾಡಿದ ಬಳಿಕ ಟ್ರಿಪೋಲಿಯ ದಕ್ಷಿಣ ನೆರೆಹೊರೆಯ ಅಬು ಸಲೀಮ್ ನಗರವನ್ನು ಕೇಂದ್ರೀಕರಿಸಿ ಸೋಮವಾರ ಸಂಜೆಯಿಂದ ಆರಂಭಗೊಂಡ ಘರ್ಷಣೆ ಮಂಗಳವಾರವೂ ಮುಂದುವರಿದಿದೆ ಎಂದು ಹಿರಿಯ ಸರ್ಕಾರಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪಶ್ಚಿಮ ಲಿಬಿಯಾದಲ್ಲಿ ಕಾರ್ಯಾಚರಿಸುತ್ತಿರುವ ಹಲವಾರು ಸಶಸ್ತ್ರ ಹೋರಾಟಗಾರರ ಗುಂಪುಗಳ ಒಕ್ಕೂಟವಾಗಿರುವ `ಎಸ್‍ಎಸ್‍ಎ'ಯ ಕಮಾಂಡರ್ ಅಲ್-ಕಿಕ್ಲಿ ಯುದ್ಧ ಅಪರಾಧ ಹಾಗೂ ಹಕ್ಕುಗಳ ಗಂಭೀರ ಉಲ್ಲಂಘನೆಯ ಆರೋಪಿ ಎಂದು ಆಮ್ನೆಸ್ಟಿ ಇಂಟರ್‍ನ್ಯಾಷಲನ್ ಆಪಾದಿಸಿದೆ. ಪ್ರಧಾನಿ ಅಬ್ದುಲ್ ಹಮೀದ್ ಡಿಬೇಬಾಗೆ ನಿಕಟವಾಗಿರುವ ಮಹ್ಮೂದ್ ಹಂಝಾ ನೇತೃತ್ವದ `444 ಬ್ರಿಗೇಡ್' ಕಿಕ್ಲಿಯನ್ನು ಹತ್ಯೆಗೈದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಕಿಕ್ಲಿಯನ್ನು ಹತ್ಯೆಗೈದ ಬಳಿಕ `444 ಬ್ರಿಗೇಡ್' ಟ್ರಿಪೋಲಿಯಾದ್ಯಂತ ಎಸ್‍ಎಸ್‍ಎ ಕಚೇರಿಗಳ ಮೇಲೆ ದಾಳಿ ನಡೆಸಿದ್ದು ಆಸ್ತಿಗಳನ್ನು ವಶಪಡಿಸಿಕೊಂಡು ಎಸ್‍ಎಸ್‍ಎ ಸದಸ್ಯರನ್ನು ಸೆರೆಹಿಡಿದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
►ವಿಶ್ವಸಂಸ್ಥೆ ಕರೆ
ಎಲ್ಲಾ ಗುಂಪುಗಳೂ ಸಂಯಮ ವಹಿಸುವಂತೆ, ಉದ್ವಿಗ್ನತೆ ಶಮನಕ್ಕೆ ಆದ್ಯತೆ ನೀಡುವಂತೆ ಮತ್ತು ಮಾತುಕತೆಯ ಮೂಲಕ ವಿವಾದಗಳನ್ನು ಪರಿಹರಿಸಿಕೊಳ್ಳುವಂತೆ ಲಿಬಿಯಾದಲ್ಲಿ ವಿಶ್ವಸಂಸ್ಥೆಯ ಬೆಂಬಲ ನಿಯೋಗ(ಯುಎನ್‍ಎಸ್‍ಎಂಐಎಲ್) ಕರೆ ನೀಡಿದೆ.
2021ರಲ್ಲಿ ಗಡಾಫಿಯವರ ಆಡಳಿತ ಪತನಗೊಂಡಂದಿನಿಂದ ಲಿಬಿಯಾದಲ್ಲಿ ಅನಿಶ್ಚಿತ ಪರಿಸ್ಥಿತಿ ಮುಂದುವರಿದಿದ್ದು ಸಶಸ್ತ್ರ ಹೋರಾಟಗಾರರ ಗುಂಪುಗಳು ದೇಶದ ಹಲವು ಪ್ರದೇಶಗಳನ್ನು ನಿಯಂತ್ರಿಸುತ್ತಿವೆ.




