ಅಮರಾವತಿ: ಆಂಧ್ರ ಪ್ರದೇಶದ ಗ್ರೀನ್‌ಫೀಲ್ಡ್ ರಾಜಧಾನಿ ಅಮರಾವತಿ ನಿರ್ಮಾಣಕ್ಕೆ ಪ್ರಧಾನಿ ಮೋದಿ ಅವರು ಶುಕ್ರವಾರ (ಮೇ 2) ಮರು ಚಾಲನೆ ನೀಡಿದರು.
ಸಿಎಂ ಎನ್.ಚಂದ್ರಬಾಬು ನಾಯ್ಡು ಅವರ ಕನಸಿನ ಯೋಜನೆ ಆಂಧ್ರದ ಅಮರಾವತಿ ನಿರ್ಮಾಣ ಯೋಜನೆಗೆ ಪ್ರಧಾನಿ ಮೋದಿ ಚಾಲನೆ ನೀಡುತ್ತಿರುವುದು ಇದು 2ನೇ ಬಾರಿಯಾಗಿದೆ.
ಈ ಹಿಂದೆ 2015ರ ಅಕ್ಟೋಬರ್ 22ರಂದು ಕೂಡ ರಾಜಧಾನಿ ನಿರ್ಮಾಣಕ್ಕೆ ಚಾಲನೆ ನೀಡಿದ್ದರು. ಡಿಸೆಂಬರ್‌ನಿಂದ ಕಾಮಗಾರಿ ಆರಂಭವಾಗುವ ಸಾಧ್ಯತೆ ಇದೆ.
ಸಮಾರಂಭದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ‘ಈ ನಗರ ಆಂಧ್ರಪ್ರದೇಶದ ಆಕಾಂಕ್ಷೆಗಳ ಸಂಕೇತ. ಕನಸು ನನಸಾಗುವುದು ವಾಸ್ತವ” ಎಂದರು.
”ಅಮರಾವತಿ ಕೇವಲ ಒಂದು ನಗರವಲ್ಲ, ಬದಲಾಗಿ ಶಕ್ತಿ, ರಾಜ್ಯವನ್ನು ಆಧುನಿಕಗೊಳಿಸಲು ಅನುವು ಮಾಡಿಕೊಡುವ ಶಕ್ತಿ ಎಂದು ಅವರು ಎತ್ತಿ ತೋರಿಸಿದರು. ಅಮರಾವತಿ ಆಂಧ್ರಪ್ರದೇಶದ ಯುವಕರ ಕನಸುಗಳನ್ನು ನನಸಾಗಿಸುತ್ತದೆ, ಕೃತಕ ಬುದ್ಧಿಮತ್ತೆ (AI), ಹಸುರು ಶಕ್ತಿ ಮತ್ತು ಕೈಗಾರಿಕಾ ಅಭಿವೃದ್ಧಿಯಂತಹ ಕ್ಷೇತ್ರಗಳಲ್ಲಿ ಪ್ರಮುಖ ನಗರವಾಗುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು.
ರಾಜ್ಯ ಸರಕಾರವು ಈ ದೃಷ್ಟಿಕೋನವನ್ನು ವಾಸ್ತವಕ್ಕೆ ತಿರುಗಿಸಲು ಕೇಂದ್ರ ಸರಕಾರವು ದಾಖಲೆಯ ವೇಗದಲ್ಲಿ ಬೆಂಬಲ ನೀಡುತ್ತದೆ ಎಂದು ಭರವಸೆ ನೀಡಿದರು.
‘ನಾನು ಗುಜರಾತ್ ಮುಖ್ಯಮಂತ್ರಿಯಾದಾಗ, ಚಂದ್ರಬಾಬು ನಾಯ್ಡು ಹೈದರಾಬಾದ್‌ನಲ್ಲಿ ಹೇಗೆ ಕೆಲಸ ಮಾಡಿದರು ಎಂಬುದನ್ನು ಹತ್ತಿರದಿಂದ ನೋಡಿದ್ದೆ. ನಾನು ಅವರಿಂದ ಬಹಳಷ್ಟು ಕಲಿತಿದ್ದೇನೆ ಮತ್ತು ಈಗ ಇದನ್ನೆಲ್ಲಾ ಕಾರ್ಯಗತಗೊಳಿಸಲು ನನಗೆ ಅವಕಾಶ ಸಿಕ್ಕಿದೆ’ ಎಂದರು.




