ನವದೆಹಲಿ: ಪಹಲ್ಗಾಮ್ ದಾಳಿಯಲ್ಲಿ ಮೃತಪಟ್ಟವರಿಗೆ ಹುತಾತ್ಮ ಸ್ಥಾನ ನೀಡುವಂತೆ ಲೋಕಸಭೆಯ ವಿರೋಧ ಪಕ್ಷ ನಾಯಕ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗುರುವಾರ ಮನವಿ ಮಾಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್ ಸಮೀಪದಲ್ಲಿರುವ ಪ್ರವಾಸಿ ಸ್ಥಳದಲ್ಲಿ ಏಪ್ರಿಲ್ 22ರಂದು ಉಗ್ರರ ಗುಂಡಿನ ದಾಳಿ ನಡೆದಿತ್ತು.
ಆ ವೇಳೆ, 26 ಮಂದಿ ಮೃತಪಟ್ಟು, 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
ಸಾಮಾಜಿಕ ಮಾಧ್ಯಮ ಎಕ್ಸ್/ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ನೋವಿನ ಸಂದರ್ಭದಲ್ಲಿ ಮೃತರ ಕುಟುಂಬಗಳೊಂದಿಗೆ ನಿಲ್ಲುವುದಾಗಿ ಹಿಂದಿಯಲ್ಲಿ ಬರೆದುಕೊಂಡಿದ್ದಾರೆ.
'ಪಹಲ್ಗಾಮ್ ದಾಳಿಯಲ್ಲಿ ಮೃತಪಟ್ಟವರ ಕುಟುಂಬದವರ ನೋವಿನಲ್ಲಿ ಜೊತೆಯಾಗಿ ನಿಲ್ಲುತ್ತೇನೆ. ಮೃತರಿಗೆ ಹುತಾತ್ಮ ಸ್ಥಾನ ನೀಡಬೇಕೆಂಬ ಅವರ ಬೇಡಿಕೆಯನ್ನು ಬೆಂಬಲಿಸುತ್ತೇನೆ. ದುರಂತದಲ್ಲಿ ಮೃತಪಟ್ಟವರಿಗೆ ಈ ಮನ್ನಣೆಯನ್ನು ನೀಡುವ ಮೂಲಕ, ಅವರ ಕುಟುಂಬದವರ ಭಾವನೆಗಳನ್ನು ಗೌರವಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದೇನೆ' ಎಂದು ತಿಳಿಸಿದ್ದಾರೆ.
ಉತ್ತರ ಪ್ರದೇಶದ ರಾಯ್ ಬರೇಲಿ ಕ್ಷೇತ್ರದ ಕಾಂಗ್ರೆಸ್ ಸಂಸದರೂ ಆಗಿರುವ ರಾಹುಲ್, ಪಹಲ್ಗಾಮ್ ದಾಳಿಯಲ್ಲಿ ಮೃತಪಟ್ಟ ಕಾನ್ಪುರ ವ್ಯಕ್ತಿಯ ಕುಟುಂಬದವರನ್ನು ಬುಧವಾರ ಭೇಟಿಯಾಗಿದ್ದರು. ನಂತರ ಮಾತನಾಡಿದ್ದ ಅವರು, ಮೃತರ ಕುಟುಂಬದವರು ಹುತಾತ್ಮ ಸ್ಥಾನಕ್ಕಾಗಿ ಒತ್ತಾಯಿಸಿದ್ದಾರೆ ಎಂದಿದ್ದರು.
ಪಹಲ್ಗಾಮ್‌ನಲ್ಲಿ ಮೃತಪಟ್ಟವರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಸಂಸತ್ತಿನ ವಿಶೇಷ ಅಧಿವೇಶನ ಕರೆಯುವಂತೆ ವಿರೋಧ ಪಕ್ಷಗಳು ಕೇಂದ್ರವನ್ನು ಒತ್ತಾಯಿಸಿವೆ ಎಂದೂ ಹೇಳಿದ್ದರು.




