ಶ್ರೀನಗರ: ನವದೆಹಲಿಯ ಮನೋಹರ್ ಪರಿಕ್ಕರ್ ರಕ್ಷಣಾ ಅಧ್ಯಯನ ಹಾಗೂ ವಿಶ್ಲೇಷಣಾ ಸಂಸ್ಥೆ, ಇಂಡಿಯನ್ ಮಿಲಿಟರಿ ಎಂಜಿನಿಯರಿಂಗ್ ಸರ್ವಿಸ್ ಸಂಸ್ಥೆಯ ವೆಬ್‌ಸೈಟ್ ಮೇಲೆ ಸೈಬರ್ ದಾಳಿ ನಡೆಸಿ ಅತ್ಯಂತ ಸೂಕ್ಷ್ಮ ಮಾಹಿತಿಗಳನ್ನು ಪಡೆಯಲಾಗಿದೆ ಎಂದು 'ಪಾಕಿಸ್ತಾನ್ ಸೈಬರ್‌ಫೋರ್ಸ್' ಸಾಮಾಜಿಕ ಮಾಧ್ಯಮ 'ಎಕ್ಸ್'ನಲ್ಲಿ ತಿಳಿಸಿದೆ.
'ಯಾವುದೇ ಸೈಬರ್ ದಾಳಿಗಳನ್ನು ಪತ್ತೆಹಚ್ಚಲು ನೆಟ್‌ವರ್ಕ್‌ಗಳ ಮೇಲೆ ನಿರಂತರ ನಿಗಾವಹಿಸಲಾಗಿದೆ' ಎಂದು ಸೈಬರ್ ಭದ್ರತಾ ತಜ್ಞರು ಹಾಗೂ ಭದ್ರತಾ ಸಂಸ್ಥೆಗಳು ತಿಳಿಸಿವೆ.
ಏ.22ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕರ ದಾಳಿ ಬಳಿಕ ಭಾರತ ಹಾಗೂ ಪಾಕಿಸ್ತಾನ ನಡುವೆ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದ್ದು, ಇದರ ಮಧ್ಯದಲ್ಲಿಯೇ ಈ ಬೆಳವಣಿಗೆ ನಡೆದಿದೆ.
'ಭಾರತದ ರಕ್ಷಣಾ ಇಲಾಖೆಗೆ ಸೇರಿದ ಸಂಸ್ಥೆಗಳ ಸೂಕ್ಷ್ಮ ಮಾಹಿತಿ, ಸೈನಿಕರ ವೈಯಕ್ತಿಕ ಮಾಹಿತಿಗಳು, ಲಾಗಿನ್ ವಿವರಗಳನ್ನು ಪಡೆಯಲಾಗಿದೆ' ಎಂದು ಪಾಕಿಸ್ತಾನ್ ಸೈಬರ್ ಫೋರ್ಸ್ 'ಎಕ್ಸ್' ಮೂಲಕ ತಿಳಿಸಿದೆ. ಮುಂಜಾಗ್ರತಾ ಕ್ರಮವಾಗಿ ಆರ್ಮ್ಡ್ ವೆಹಿಕಲ್ ನಿಗಮ್ ವೆಬ್‌ಸೈಟ್ (ಎವಿಎನ್‌ಎಲ್) ಅನ್ನು ಆಫ್‌ಲೈನ್ ಮಾಡಲಾಗಿದೆ. ಯಾವುದೇ ಸಂಭಾವ್ಯ ಹಾನಿಯನ್ನು ನಿರ್ಣಯಿಸಲು, ಸೂಕ್ತ ಕ್ರಮ ಕೈಗೊಳ್ಳಲಾಗಿದೆ' ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.






