ಪಣಜಿ: ಉತ್ತರ ಗೋವಾದಲ್ಲಿ ದೇವಸ್ಥಾನದ ಉತ್ಸವ ಸಮಾರಂಭದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 6 ಜನರು ಸಾವಿಗೀಡಾದ ಒಂದು ದಿನದ ನಂತರ ಭಾನುವಾರ ಮತ್ತೆ ಪೂಜಾ ಕಾರ್ಯಕ್ರಮ ಹಾಗೂ ವಿವಿಧ ಆಚರಣೆಗಳು ಮುಂದುವರಿದವು. ದೇವಸ್ಥಾನಕ್ಕೆ ಬಾರದಂತೆ ಅದರ ಆಡಳಿತ ಸಮಿತಿಯು ಜನರಲ್ಲಿ ಮನವಿ ಮಾಡಿದೆ.
ನೂರಾರು ಭಕ್ತರು ಭಾನುವಾರ ಗ್ರಾಮಕ್ಕೆ ಭೇಟಿ ನೀಡಿ ಸ್ಥಳೀಯರ ಮನೆಯಲ್ಲಿ ದೇವರ ಆರಾಧನೆ ಮಾಡಿದರು. 'ಹೋಮಕುಂಡ' ಆಚರಣೆಯನ್ನು ನಡೆಸಲಾಯಿತು. ಭಕ್ತರು ಕೆಂಡದ ಮೇಲೆ ನಡೆದು ತಮ್ಮ ಸೇವೆ ಸಲ್ಲಿಸಿದರು.
'ದೇವಿಯು ದೇವಸ್ಥಾನಕ್ಕೆ ಮರಳುವ ಮುನ್ನ 4 ದಿನ ಸ್ಥಳೀಯರ ಮನೆಗಳಿಗೆ ಭೇಟಿ ನೀಡುತ್ತಾರೆ ಎಂಬ ನಂಬಿಕೆ ಇದೆ. ಈ 'ಕೌಲ' ಅವಧಿಯಲ್ಲಿ ಆಚರಣೆಗಳನ್ನು ನಿಲ್ಲಿಸಲು ಸಾಧ್ಯವಿಲ್ಲ. ಕಾಲ್ತುಳಿತ ದುರಂತವು ದುರದೃಷ್ಟಕರ. ಗ್ರಾಮಕ್ಕೆ ಬಾರದೇ ಇರುವಂತೆ ಸಾರ್ವಜನಿಕರಲ್ಲಿ ನಾವು ಮನವಿ ಮಾಡಿದ್ದೇವೆ. ಸ್ಥಳದಲ್ಲಿ ಬಿಗಿ ಬಂದೋಬಸ್ತ್ ನಿಯೋಜಿಸಲಾಗಿದೆ' ಎಂದು ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷರು ತಿಳಿಸಿದರು.
ಶಿರಗಾಂವ್ ಗ್ರಾಮದಲ್ಲಿ ಶ್ರೀ ಲೈರಾಯಿ ದೇವಿ ದೇವಸ್ಥಾನದ ವಾರ್ಷಿಕ ಉತ್ಸವದಲ್ಲಿ ಶನಿವಾರ ಮುಂಜಾನೆ ಕಾಲ್ತುಳಿತ ದುರಂತ ಸಂಭವಿಸಿ ಇಬ್ಬರು ಮಹಿಳೆಯರು ಸೇರಿದಂತೆ ಆರು ಜನರು ಸಾವಿಗೀಡಾಗಿದರು. ಗಾಯಗೊಂಡಿದ್ದ 70 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ.




