ಹೈದರಾಬಾದ್:ಪವಿತ್ರ ತಿರುಪತಿ ತಿರುಮಲದಲ್ಲಿ ಗುರುವಾರ(ಮೇ22) ಪುರೋಹಿತ ಸಂಘಂ ಪ್ರದೇಶದಲ್ಲಿ ಹಜರತ್ ಟೋಪಿ ಧರಿಸಿ ವ್ಯಕ್ತಿಯೊಬ್ಬ ನಮಾಜ್ ಮಾಡುತ್ತಿದ್ದ ವಿಡಿಯೋ ವೈರಲ್ ಆಗಿದ್ದು ವಿವಾದ ಭುಗಿಲೆದ್ದಿದೆ.
ಹಜರತ್ ಟೋಪಿ ಧರಿಸಿದ್ದ ವ್ಯಕ್ತಿ 10 ನಿಮಿಷಗಳಿಗೂ ಹೆಚ್ಚು ಕಾಲ ಪ್ರಾರ್ಥನೆ ಸಲ್ಲಿಸುತ್ತಿದ್ದುದನ್ನು ಪ್ರತ್ಯಕ್ಷದರ್ಶಿಗಳು ನೋಡಿದ್ದಾರೆ.
ಯಾರೋ ಒಬ್ಬರು ವಿಡಿಯೋ ಮಾಡಿ ಸಾಮಾಜಿಕ ತಾಣದಲ್ಲಿ ಹಂಚಿಕೊಂಡಿದ್ದು ಈಗ ವೈರಲ್ ಆಗುತ್ತಿದ್ದು ವ್ಯಾಪಕ ಆಕ್ರೋಶವೂ ವ್ಯಕ್ತವಾಗಿದೆ. ಬಿಜೆಪಿ ಆಂಧ್ರ ಪ್ರದೇಶ ಘಟಕವು ಇದು ವೈಎಸ್ ಆರ್ ಕಾಂಗ್ರೆಸ್ ಮಾಡಿದ ಪಿತೂರಿ ಎಂದು ಆರೋಪಿಸಿದೆ.
ತಿರುಮಲ ತಿರುಪತಿ ದೇವಸ್ಥಾನಂ (TTD) ಜಾಗೃತ ತಂಡವು ನಮಾಜ್ ಮಾಡಿದ ವ್ಯಕ್ತಿಯನ್ನು ಗುರುತಿಸಲು ತನಿಖೆ ಆರಂಭಿಸಿದೆ. ಸಿಸಿಟಿವಿ ದೃಶ್ಯಾವಳಿಗಳು ಮತ್ತು ವಾಹನದ ನೋಂದಣಿ ಸಂಖ್ಯೆಯನ್ನು ಬಳಸಿಕೊಂಡು ಪತ್ತೆ ಕಾರ್ಯ ನಡೆಸುತ್ತಿದ್ದಾರೆ.
ಟಿಟಿಡಿ ಮೂಲಗಳ ಪ್ರಕಾರ, ಆ ವ್ಯಕ್ತಿ ಚಾಲಕನಾಗಿದ್ದು ತಮಿಳುನಾಡಿನಿಂದ ಹಿಂದೂ ಭಕ್ತರೊಂದಿಗೆ ತಿರುಮಲಕ್ಕೆ ಬಂದಿದ್ದಾರೆ. ಈ ಸ್ಥಳದಲ್ಲಿ ನಮಾಜ್ ಮಾಡಬಹುದೇ ಎಂದು ಸ್ಥಳೀಯ ವ್ಯಕ್ತಿಯೊಬ್ಬನಲ್ಲಿ ವಿಚಾರಿಸಿದ್ದು ಅವರು ಒಪ್ಪಿಕೊಂಡ ಬಳಿಕ ಪ್ರಾರ್ಥನೆ ಸಲ್ಲಿಸಿದ್ದಾನೆ ಎಂದು ಹೇಳಲಾಗಿದೆ.




