ಪ್ಯಾರಿಸ್: ಪಾಕಿಸ್ತಾನ ಪ್ರಚೋದಿತ ಭಯೋತ್ಪಾದನೆ ಕುರಿತು ಮನವರಿಕೆ ಮಾಡಿಕೊಡಲು ಐರೋಪ್ಯ ಒಕ್ಕೂಟದ ಆರು ರಾಷ್ಟ್ರಗಳ ಪ್ರವಾಸವನ್ನು ಬಿಜೆಪಿ ನಾಯಕ ರವಿಶಂಕರ ಪ್ರಸಾದ್ ನೇತೃತ್ವದ ಸಂಸದರ ನಿಯೋಗ ಪ್ಯಾರಿಸ್‌ನಿಂದ ಆರಂಭಿಸಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ರವಿಶಂಕರ ಪ್ರಸಾದ್, 'ಸರ್ಕಾರಿ ಪ್ರಾಯೋಜಿತ ಬರ್ಬರ ಭಯೋತ್ಪಾದನೆಯ ವಿಚಾರದಲ್ಲಿ ಇಡೀ ಜಗತ್ತು ಒಂದೇ ಧ್ವನಿಯಾಗಿ ಮಾತನಾಡಬೇಕು' ಎಂದು ಹೇಳಿದರು.
'ಭಾರತವು ಶಾಂತಿ ಮತ್ತು ಸ್ನೇಹ ಬಯಸುತ್ತದೆ. ಆದರೆ, ಅಮಾಯಕ ಭಾರತೀಯರ ಜೀವವನ್ನು ಬಲಿ ಕೊಡುವುದಿಲ್ಲ. ಪಹಲ್ಗಾಮ್‌ನಲ್ಲಿ ನಡೆದಿದ್ದು ಬರ್ಬರ ದಾಳಿ. ಭಯೋತ್ಪಾದನೆ ಇಂದು ಜಾಗತಿಕ ಸಮಸ್ಯೆಯಾಗಿದೆ. ಕ್ಯಾನ್ಸರ್‌ನಂತೆ ಹರಡಿದೆ. ಫ್ರಾನ್ಸ್, ಇಂಗ್ಲೆಂಡ್, ಬೆಲ್ಜಿಯಂ ಸೇರಿದಂತೆ ಐರೋಪ್ಯ ಒಕ್ಕೂಟದ ರಾಷ್ಟ್ರಗಳೂ ಇದರ ಬಲಿಪಶುಗಳಾಗಿವೆ' ಎಂದು ಹೇಳಿದರು.
ಒಂಬತ್ತು ಸದಸ್ಯರ ನಿಯೋಗವು ಫ್ರಾನ್ಸ್ ಪ್ರವಾಸದ ಆರಂಭದಲ್ಲಿ ಇಲ್ಲಿನ ಸೆನೆಟ್, ರಾಷ್ಟ್ರೀಯ ಸಂಸತ್ತು, ಚಿಂತಕರು ಮತ್ತು ಅನಿವಾಸಿ ಭಾರತೀಯರ ಜೊತೆ ಚರ್ಚೆ ನಡೆಸಲಿದೆ. ಇಲ್ಲಿನ ವಿದೇಶಾಂಗ ಇಲಾಖೆಯು ಸಂಸದರೊಂದಿಗೆ ಸಂವಾದ ಏರ್ಪಡಿಸಿದೆ.
ಇಂಗ್ಲೆಂಡ್, ಜರ್ಮನಿ, ಐರೋಪ್ಯ ಒಕ್ಕೂಟ, ಇಟಲಿ ಮತ್ತು ಡೆನ್ಮಾರ್ಕ್‌ಗೂ ನಿಯೋಗ ಭೇಟಿ ನೀಡಲಿದೆ. ಸರ್ವ ಪಕ್ಷ ನಿಯೋಗದ ಏಳನೇ ತಂಡದಲ್ಲಿ ದಗ್ಗುಬಾಟಿ ಪುರಂದೇಶ್ವರಿ, ಪ್ರಿಯಾಂಕ ಚತುರ್ವೇದಿ, ಗುಲಾಮ್ ಅಲಿ ಖತಾನ, ಡಾ.ಅಮರ್ ಸಿಂಗ್, ಸಮಿಕ್ ಭಟ್ಟಾಚಾರ್ಯ, ಎಂ.ತಂಬಿದೊರೈ ಎಂ.ಜೆ.ಅಕ್ಬರ್, ಮಾಜಿ ರಾಷ್ಟ್ರೀಯ ಭದ್ರತಾ ಉಪ ಸಲಹೆಗಾರ ಪಂಕಜ್ ಸರನ್ ಇದ್ದಾರೆ.




