ಪಟ್ನಾ: ಪ್ರಧಾನಿ ನರೇಂದ್ರ ಮೋದಿ ಭಯೋತ್ಪಾದನೆಯ ವಿರುದ್ಧ ಸಮರ ಸಾರಿದ್ದು, ಆಪರೇಷನ್ ಸಿಂಧೂರ ಭಾರತದ ಬತ್ತಳಿಕೆಯಲ್ಲಿರುವ ಬಾಣವಷ್ಟೇ. ಭಯೋತ್ಪಾದನೆಯ ವಿರುದ್ಧ ಭಾರತದ ಹೋರಾಟ ಮುಗಿದಿಲ್ಲ ಅಥವಾ ನಿಂತಿಲ್ಲ ಎಂದು ಸ್ಪಷ್ಟ ಸಂದೇಶ ರವಾನಿಸಿದ್ದಾರೆ.
ಮುಂಬರುವ ಬಿಹಾರ ವಿಧಾನಸಭಾ ಚುನಾವಣೆ ಹಿನ್ನೆಲೆ ರಾಜ್ಯಕ್ಕೆ ಭೇಟಿ ನೀಡಿರುವ ಪ್ರಧಾನಿ ಮೋದಿ, ರೋಹ್ತಾಸ್ ಜಿಲ್ಲೆಯಲ್ಲಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಪಹಲ್ಗಾಮ್ ಭಯೋತ್ಪಾದಕ ದಾಳಿ ನಡೆದ ಒಂದು ದಿನದ ಬಳಿಕ ಬಿಹಾರಕ್ಕೆ ಭೇಟಿ ನೀಡಿದ್ದೆ ಮತ್ತು ಅಂದು ನಾನು ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಉಗ್ರರ ನೆಲೆಗಳನ್ನು ನಾಶಪಡಿಸಲಾಗುವುದು ಎಂದು ಭರವಸೆ ನೀಡಿದ್ದೆ. ಆ ಭರವಸೆಯನ್ನು ಈಡೇರಿಸಿ ಮತ್ತೆ ಬಿಹಾರಕ್ಕೆ ಬಂದಿದ್ದೇನೆ ಎಂದು ಮೋದಿ ಹೇಳಿದ್ದಾರೆ.
'ಭಯೋತ್ಪಾದನೆಯನ್ನು ಸರ್ಪಕ್ಕೆ ಹೋಲಿಸಿದ್ದು, ಮತ್ತೆ ಅದೇನಾದರೂ ಎಡೆ ಎತ್ತಿದರೆ, ಬಿಲದಿಂದ ಹೊರಗೆಳೆದು ಕೊಲ್ಲಲಾಗುತ್ತದೆ. ಆಪರೇಷನ್ ಸಿಂಧೂರ ಭಾರತದ ಬತ್ತಳಿಕೆಯಲ್ಲಿರುವ ಬಾಣವಷ್ಟೇ. ಭಯೋತ್ಪಾದನೆಯ ವಿರುದ್ಧದ ಸಮರ ಮುಗಿದಿಲ್ಲ ಅಥವಾ ನಿಂತಿಲ್ಲ' ಎಂದು ಮೋದಿ ತಿಳಿಸಿದ್ದಾರೆ.
'ಭಾರತದ ಹೆಣ್ಣುಮಕ್ಕಳು ಧರಿಸುವ ಸಿಂಧೂರದ (ಸಿಂಧೂರ) ಶಕ್ತಿಯನ್ನು ಪಾಕಿಸ್ತಾನ ಮತ್ತು ಇಡೀ ಜಗತ್ತು ನೋಡಿದೆ. ಪಾಕಿಸ್ತಾನಿ ಸೈನ್ಯದ ರಕ್ಷಣೆಯಲ್ಲಿ ಭಯೋತ್ಪಾದಕರು ಸುರಕ್ಷಿತ ಭಾವನೆ ಹೊಂದಿದ್ದರು. ಆದರೆ ಭಾರತೀಯ ಸಶಸ್ತ್ರ ಪಡೆಗಳು ಪಾಕಿಸ್ತಾನದ ಉಗ್ರರ ನೆಲೆಗಳನ್ನು ನಾಶಪಡಿಸಿವೆ. ಈ ಮೂಲಕ ನವ ಭಾರತ ಶಕ್ತಿ ಎಲ್ಲರಿಗೂ ಅರಿವಾಗಿದೆ' ಎಂದು ಮೋದಿ ಹೇಳಿದ್ದಾರೆ.
'ಸಾಮಾಜಿಕ ನ್ಯಾಯದ ಹೆಸರಿನಲ್ಲಿ ಕಾಂಗ್ರೆಸ್ ಮತ್ತು ಆರ್‌ಜೆಡಿ ಪಕ್ಷವು ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಸಮುದಾಯಗಳಿಗೆ ವಂಚಿಸುತ್ತಿದೆ ಎಂದು ಪ್ರಧಾನಿ ಆರೋಪಿಸಿದ್ದು, ಆದರೆ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದಲ್ಲಿ ಬಿಹಾರದಲ್ಲಿ ಬಹಳಷ್ಟು ಅಭಿವೃದ್ಧಿ ಕೆಲಸಗಳಾಗಿವೆ. ಬಿಹಾರವಿಲ್ಲದೆ ವಿಕ್ಷಿತ ಭಾರತವನ್ನು ಊಹಿಸಲು ಸಾಧ್ಯವಿಲ್ಲ' ಎಂದು ತಿಳಿಸಿದ್ದಾರೆ.
ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಮೃತಪಟ್ಟಿದ್ದರು. ಇದಕ್ಕೆ ಪ್ರತೀಕಾರವಾಗಿ ಭಾರತ ಉಗ್ರರ ನೆಲೆಗಳನ್ನು ಗುರಿಯಾಗಿಸಿ ಕ್ಷಿಪಣಿ ದಾಳಿ 'ಆಪರೇಷನ್ ಸಿಂಧೂರ' ನಡೆಸುವ ಮೂಲಕ ತಕ್ಕ ಉತ್ತರ ನೀಡಿತ್ತು.
ಭಾರತವು ಪಾಕಿಸ್ತಾನದ ವಿವಿಧ ನಗರಗಳನ್ನು ಗುರಿಯಾಗಿಸಿ ದಾಳಿ ನಡೆಸುವ ಮೂಲಕ ಪಾಕ್‌ಗೆ ತಿರುಗೇಟು ನೀಡಿತ್ತು. ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಪಂಜಾಬ್, ಗುಜರಾತ್. ರಾಜಸ್ಥಾನ ಗಡಿ ಪ್ರದೇಶಗಳಲ್ಲಿ ಪಾಕಿಸ್ತಾನದಿಂದ ನಡೆದ ದಾಳಿಗೂ ಭಾರತೀಯ ಸೇನೆ ದಿಟ್ಟ ಪ್ರತಿರೋಧ ಒಡ್ಡಿತ್ತು.




