HEALTH TIPS

ಸ್ವರ್ಣ ಮಂದಿರಕ್ಕೆ ವಾಯು ರಕ್ಷಣಾ ಸೌಲಭ್ಯ ನಿಯೋಜಿಸಿರಲಿಲ್ಲ: ಭಾರತೀಯ ಸೇನೆ

ಅಮೃತಸರ: 'ಆಪರೇಷನ್ ಸಿಂಧೂರ'ದ ವೇಳೆ ಸ್ವರ್ಣ ಮಂದಿರದ ಆವರಣದಲ್ಲಿ ಯಾವುದೇ ವಾಯು ರಕ್ಷಣಾ ಫಿರಂಗಿಗಳನ್ನು ಅಥವಾ ವಾಯು ರಕ್ಷಣಾ ವ್ಯವಸ್ಥೆಯ ಯಾವುದೇ ಸೌಲಭ್ಯಗಳನ್ನು ನಿಯೋಜಿಸಿರಲಿಲ್ಲ' ಎಂದು ಭಾರತೀಯ ಸೇನೆ ಮಂಗಳವಾರ ತಿಳಿಸಿದೆ.

ಪಾಕಿಸ್ತಾನದ ಡ್ರೋನ್‌ಗಳು ಮತ್ತು ಕ್ಷಿಪಣಿಗಳ ಸಂಭವನೀಯ ದಾಳಿ ಎದುರಿಸಲು ಸ್ವರ್ಣ ಮಂದಿರದ ಆಡಳಿತವು ಆವರಣದೊಳಗೆ ವಾಯು ರಕ್ಷಣಾ ಫಿರಂಗಿಗಳನ್ನು ನಿಯೋಜಿಸಲು ಸೇನೆಗೆ ಅವಕಾಶ ನೀಡಿದೆ ಎಂಬ ಮಾಧ್ಯಮ ವರದಿಗಳ ನಂತರ ಸೇನೆಯು ಈ ಸ್ಪಷ್ಟನೆ ನೀಡಿದೆ.

'ಸ್ವರ್ಣ ಮಂದಿರದಲ್ಲಿ ವಾಯು ರಕ್ಷಣಾ ಫಿರಂಗಿಗಳನ್ನು ಅಳವಡಿಸಲಾಗಿದೆ ಎಂದು ಕೆಲವು ಮಾಧ್ಯಮಗಳಲ್ಲಿ ವರದಿಯಾಗಿದೆ. ಅಮೃತಸರದ ಶ್ರೀ ದರ್ಬಾರ್‌ ಸಾಹಿಬ್‌ (ಗೋಲ್ಡನ್‌ ಟೆಂಪಲ್‌) ಆವರಣದಲ್ಲಿ ಯಾವುದೇ ರಕ್ಷಣಾ ವ್ಯವಸ್ಥೆಯ ಶಸ್ತ್ರಾಸ್ತ್ರಗಳನ್ನು ನಿಯೋಜಿಸಿಲ್ಲ' ಎಂದು ಸೇನೆಯ ಹೇಳಿಕೆಯಲ್ಲಿ ತಿಳಿಸಿದೆ.

ಸ್ವರ್ಣ ಮಂದಿರದಲ್ಲಿ ವಾಯು ರಕ್ಷಣಾ ಫಿರಂಗಿಗಳನ್ನು ನಿಯೋಜಿಸಲು ಭಾರತೀಯ ಸೇನೆಗೆ ಯಾವುದೇ ಅನುಮತಿ ನೀಡಿಲ್ಲ ಎಂದು ಮಂದಿರದ ಹೆಚ್ಚುವರಿ ಪ್ರಧಾನ ಅರ್ಚಕ ಗ್ಯಾನಿ ಅಮರ್ಜೀತ್ ಸಿಂಗ್ ಮತ್ತು ಸಿಖ್ಖರ ಪ್ರಮುಖ ಧಾರ್ಮಿಕ ಸಂಸ್ಥೆಯಾದ ಶಿರೋಮಣಿ ಗುರುದ್ವಾರ ಪ್ರಬಂಧಕ ಕಮಿಟಿ (ಎಸ್‌ಜಿಪಿಸಿ) ಅಧ್ಯಕ್ಷ ಹರ್ಜಿಂದರ್ ಸಿಂಗ್ ಧಾಮಿ ಕೂಡ ಸ್ಪಷ್ಟನೆ ನೀಡಿದ್ದಾರೆ.

ಭಾರತ ಮತ್ತು ಪಾಕಿಸ್ತಾನದ ನಡುವೆ ಇತ್ತೀಚೆಗೆ ಉದ್ವಿಗ್ನತೆ ಉಲ್ಬಣಗೊಂಡ ನಂತರ 'ಬ್ಲಾಕ್‌ಔಟ್‌' ಸಮಯದಲ್ಲಿ ವಿದ್ಯುತ್‌ ದೀಪಗಳನ್ನು ಆರಿಸಲು ಮಾತ್ರ ಜಿಲ್ಲಾಡಳಿತ ಸಂಪರ್ಕಿಸಿತ್ತು. ಆಡಳಿತಾತ್ಮಕ ಜವಾಬ್ದಾರಿಯ ಹಿತದೃಷ್ಟಿಯಿಂದ, ಮಂದಿರದ ಶಿಷ್ಟಾಚಾರ ಮತ್ತು ಪಾವಿತ್ರ್ಯತೆಗೆ ಅನುಗುಣವಾಗಿ ಸಂಪೂರ್ಣವಾಗಿ ಸಹಕರಿಸಲಾಗಿದೆ. ಶ್ರೀ ಹರ್ಮಂದರ್ ಸಾಹಿಬ್‌ನಲ್ಲಿ ವಾಯು ರಕ್ಷಣಾ ಫಿರಂಗಿಗಳ ನಿಯೋಜಿಸಲು ಯಾವುದೇ ಮಿಲಿಟರಿ ಅಧಿಕಾರಿಯು ಸಂಪರ್ಕ ಮಾಡಿಲ್ಲ ಎಂದು ಧಾಮಿ ಹೇಳಿದರು.

ಬ್ಲ್ಯಾಕೌಟ್ ಸಮಯದಲ್ಲಿ ಸಹ, ಹೆಚ್ಚಿನ ಸಂಖ್ಯೆಯ ಭಕ್ತರು ಸ್ವಯಂಪ್ರೇರಿತ ಸೇವೆಗೆ ಮಂದಿರಕ್ಕೆ ಭೇಟಿ ನೀಡಿದ್ದರು. ಯಾವುದಾದರು ಶಸ್ತ್ರಾಸ್ತ್ರಗಳನ್ನು ನಿಯೋಜಿಸಿದ್ದ ಘಟನೆಗಳು ನಡೆದಿದ್ದರೆ, ಸಂಗತ್ (ಸಭೆ) ಖಂಡಿತವಾಗಿಯೂ ಗಮನಿಸುತ್ತಿತ್ತು ಎಂದು ಅವರು ಒತ್ತಿ ಹೇಳಿದ್ದಾರೆ.

ಉದ್ವಿಗ್ನತೆಯ ಸಂದರ್ಭ ಸೇನೆ ಮತ್ತು ದೇಶವು ವಹಿಸಿದ ಪಾತ್ರ ಶ್ಲಾಘನೀಯವಾದುದು. ಆದರೆ, ಸಿಖ್ಖರ ಪ್ರಮುಖ ಧಾರ್ಮಿಕ ಸ್ಥಳದ ಬಗ್ಗೆ ಇಂತಹ ಸುಳ್ಳನ್ನು ಹರಡುವುದು ಆಘಾತಕಾರಿಯಾದುದು. ಸರ್ಕಾರ ಕೂಡ ಸ್ಪಷ್ಟನೆ ನೀಡಬೇಕು ಎಂದು ಅವರು ಒತ್ತಾಯಿಸಿದರು.

ಗ್ಯಾನಿ ಅಮರ್ಜೀತ್ ಸಿಂಗ್ ಸ್ವರ್ಣ ಮಂದಿರದ ಹೆಚ್ಚುವರಿ ಪ್ರಧಾನ ಅರ್ಚಕಮಂದಿರದಲ್ಲಿ ಧಾರ್ಮಿಕ ವಿಧಿವಿಧಾನ ಪಾಲಿಸುವ ಸ್ಥಳಗಳಲ್ಲಿನ ದೀಪಗಳನ್ನು ನಂದಿಸಿರಲಿಲ್ಲ ಮತ್ತು ಧಾರ್ಮಿಕ ಸ್ಥಳದ ಪಾವಿತ್ರ್ಯವನ್ನು ಸಂಪೂರ್ಣ ಜವಾಬ್ದಾರಿಯಿಂದ ಕಾಪಾಡಿಕೊಳ್ಳಲಾಗಿದೆ ಹರ್ಜಿಂದರ್ ಸಿಂಗ್ ಧಾಮಿ ಶಿರೋಮಣಿ ಗುರುದ್ವಾರ ಪ್ರಬಂಧಕ ಕಮಿಟಿ ಮುಖ್ಯಸ್ಥಗ್ಯಾನಿ ಅಮರ್ಜೀತ್ ಸಿಂಗ್ ಅವರೊಂದಿಗೆ ಸಮಾಲೋಚಿಸಿದ ನಂತರ ಜಿಲ್ಲಾಡಳಿತದ ನಿರ್ದೇಶನಗಳಂತೆ ಮಂದಿರದ ಬಾಹ್ಯ ದೀಪಗಳನ್ನು ಮಾತ್ರ ಆರಿಸಲಾಗಿತ್ತು

ವರದಿಗಳಲ್ಲಿ ಸತ್ಯಾಂಶವಿಲ್ಲ: ಸಿಂಗ್‌

ಮಾಧ್ಯಮ ವರದಿಗಳಲ್ಲಿ ಯಾವುದೇ ಸತ್ಯಾಂಶಗಳಿಲ್ಲ. ಇಂತಹ ವರದಿ ಮತ್ತು ಹೇಳಿಕೆಗಳು ಆಶ್ಚರ್ಯವನ್ನುಂಟುಮಾಡಿವೆ ಎಂದೂ ಸ್ವರ್ಣ ಮಂದಿರದ ಹೆಚ್ಚುವರಿ ಪ್ರಧಾನ ಅರ್ಚಕ ಗ್ಯಾನಿ ಅಮರ್ಜೀತ್ ಸಿಂಗ್ ಹೇಳಿದ್ದಾರೆ.

ಉದ್ವಿಗ್ನತೆಯ ವೇಳೆ ಸ್ವರ್ಣ ಮಂದಿರ ಗುರು ರಾಮದಾಸ್‌ ಜೀ ದ್ವಾರ ಶ್ರೀ ಅಖಂಡ ಪತ್‌ ಸಾಹಿಬ್‌ ಹಾಗೂ ಇನ್ನಿತರ ಸಂಬಂಧಿತ ಗುರುದ್ವಾರಗಳಲ್ಲಿ ಕಟ್ಟುನಿಟ್ಟಾಗಿ ಶಿಷ್ಟಾಚಾರ ಪಾಲಿಸಲಾಗಿದೆ. ಇದರಲ್ಲಿ ಯಾರಿಗೂ ಹಸ್ತಕ್ಷೇಪ ಮಾಡುವ ಹಕ್ಕು ಇಲ್ಲ ಎಂದು ಸಿಂಗ್ ಹೇಳಿದರು.

ಉದ್ವಿಗ್ನ ಪರಿಸ್ಥಿತಿಯ ಹೊರತಾಗಿಯೂ ಹರ್ಮಂದರ್ ಸಾಹಿಬ್‌ನಲ್ಲಿ ಧಾರ್ಮಿಕ ವಿಧಿವಿಧಾನಗಳನ್ನು ಸಂಪೂರ್ಣ ಶ್ರದ್ಧಾಭಕ್ತಿಯಿಂದ ನಡೆಸಲಾಗಿದೆ. 'ಮರ್ಯಾದಾ' ಆಚರಿಸುತ್ತಿರುವ ಸಿಖ್ಖರ ಯಾವುದೇ ಧಾರ್ಮಿಕ ಸ್ಥಳಗಳಲ್ಲಿ ಬ್ಲಾಕ್‌ಔಟ್‌ ವೇಳೆಯೂ ಪೂಜಾ ದೀಪಗಳನ್ನು ನಂದಿಸಲಿಲ್ಲ ಎಂದೂ ಅವರು ಸ್ಪಷ್ಟಪಡಿಸಿದರು.

'ಸಿಂಧೂರ ಕಾರ್ಯಾಚರಣೆ' ಸಮಯದಲ್ಲಿ ವಿದೇಶದಲ್ಲಿದ್ದ ಹರ್ಮಂದರ್ ಸಾಹಿಬ್‌ನ ಪ್ರಧಾನ ಮುಖ್ಯಸ್ಥ ಗ್ಯಾನಿ ರಘ್‌ಬೀರ್‌ ಸಿಂಗ್ ಮಂದಿರದಲ್ಲಿ ಯಾವುದೇ ಶಸ್ತ್ರಾಸ್ತ್ರಗಳ ನಿಯೋಜಿಸಲು ಯಾವುದೇ ಸೇನಾಧಿಕಾರಿ ತಮ್ಮೊಂದಿಗೆ ಮಾತನಾಡಿಲ್ಲ ಸ್ವರ್ಣ ಮಂದಿರದಲ್ಲಿ ಈ ರೀತಿಯ ಯಾವುದೇ ಘಟನೆಯೂ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries