ನವದೆಹಲಿ: 'ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಸಮುದಾಯದ ಅರ್ಹ ಅಭ್ಯರ್ಥಿಗಳಿಗೆ ಅರ್ಹತೆ ಇದ್ದರೂ, 'ಅರ್ಹರೆಂದು ಪರಿಗಣಿಸಲಾಗದು' ಎಂಬುದಾಗಿ ಉದ್ದೇಶಪೂರ್ವಕವಾಗಿಯೇ ಘೋಷಿಸುವ ಮೂಲಕ ಅವರನ್ನು ಶಿಕ್ಷಣ ಮತ್ತು ನಾಯಕತ್ವದಿಂದ ದೂರ ಇಡಲಾಗುತ್ತಿದೆ' ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
'ಅರ್ಹರೆಂದು ಪರಿಗಣಿಸಲಾಗದು' ಎಂಬುದು ಈಗ ನೂತನ ಮನುವಾದವಾಗಿದೆ' ಎಂದು ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರೂ ಆಗಿರುವ ರಾಹುಲ್ ಗಾಂಧಿ ಟೀಕಿಸಿದ್ದಾರೆ.
ದೆಹಲಿ ವಿಶ್ವವಿದ್ಯಾಲಯ ವಿದ್ಯಾರ್ಥಿಗಳ ಸಂಘಟನೆ (ಡಿಯುಎಸ್‌ಯು) ವಿದ್ಯಾರ್ಥಿಗಳೊಂದಿಗೆ ಮೇ 22ರಂದು ನಡೆಸಿದ ಸಂವಾದದಲ್ಲಿ ಅವರು ಈ ಮಾತು ಹೇಳಿದ್ದು, ಸಂವಾದದ ವಿಡಿಯೊವನ್ನು ಸಾಮಾಜಿಕ ಮಾಧ್ಯಮ 'ಎಕ್ಸ್'ನಲ್ಲಿ ಹಂಚಿಕೊಳ್ಳಲಾಗಿದೆ.
'ಬಿಜೆಪಿ ಮತ್ತು ಆರ್‌ಎಸ್‌ಎಸ್ ಮೀಸಲಾತಿ ವಿರೋಧಿ ನಡೆ ಅನುಸರಿಸುತ್ತಿವೆ. ಸಂವಿಧಾನ ನೀಡಿರುವ ಶಕ್ತಿ ಬಳಸಿ ಹಾಗೂ ವಿದ್ಯಾರ್ಥಿಗಳೊಂದಿಗೆ ಸೇರಿ, ಇಂತಹ ಪ್ರತಿ ನಡೆಗೆ ನಾವು ಉತ್ತರ ನೀಡುತ್ತೇವೆ' ಎಂದು ರಾಹುಲ್ ಗಾಂಧಿ ಹೇಳಿರುವುದು ವಿಡಿಯೊದಲ್ಲಿದೆ.
'ಸಮಾನತೆ ಸಾಧಿಸಲು ಶಿಕ್ಷಣವೇ ದೊಡ್ಡ ಅಸ್ತ್ರ ಎಂಬುದಾಗಿ ಡಾ.ಬಿ.ಆರ್.ಅಂಬೇಡ್ಕರ್ ಹೇಳಿದ್ದರು. ಆದರೆ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಹಾಗೂ ಆರ್‌ಎಸ್‌ಎಸ್ ಈ ಶಕ್ತಿಯನ್ನೇ ದಮನ ಮಾಡುತ್ತಿವೆ' ಎಂದು ಆರೋಪಿಸಿದ್ದಾರೆ.
ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಇತ್ತೀಚೆಗೆ ದೆಹಲಿ ವಿಶ್ವವಿದ್ಯಾಲಯ ವಿದ್ಯಾರ್ಥಿ ಸಂಘಟನೆ (ಡಿಯುಎಸ್‌ಯು) ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ್ದರು -ಪಿಟಿಐ ಚಿತ್ರ **EDS: THIRD PARTY IMAGE** In this image released by AICC on Tuesday May 27 2025 Leader of Opposition in the Lok Sabha Rahul Gandhi during a meeting with DUSU students in New Delhi. Gandhi alleged that qualified SC/ST/OBC candidates are being deliberately disqualified and kept away from leadership roles. (AICC/PTI Photo) (PTI05_27_2025_000070B)
ರಾಹುಲ್ ಆರೋಪಗಳು
* ಮೀಸಲಾತಿ ಇರುವ ಹುದ್ದೆಗಳ ಪೈಕಿ ಶೇ 60ಕ್ಕೂ ಹೆಚ್ಚು ಪ್ರಾಧ್ಯಾಪಕ ಹುದ್ದೆಗಳು ಶೇ 30ಕ್ಕೂ ಅಧಿಕ ಸಹ ಪ್ರಾಧ್ಯಾಪಕ ಹುದ್ದೆಗಳನ್ನು ಭರ್ತಿ ಮಾಡಿಲ್ಲ. 'ಅರ್ಹರೆಂದು ಪರಿಗಣಿಸಲಾಗದು' ಎಂಬ ವಿಧಾನವನ್ನು ಬಳಸಿ ಈ ಮೀಸಲು ಹುದ್ದೆಗಳನ್ನು ಭರ್ತಿ ಮಾಡುತ್ತಿಲ್ಲ
* ಐಐಟಿಗಳು ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ಕೂಡ ಇದೇ ವಿಧಾನವನ್ನು ಅನುಸರಿಸಲಾಗುತ್ತಿದೆ. ಇದು ಸಾಮಾಜಿಕ ನ್ಯಾಯಕ್ಕೆ ಮಾಡುವ ದ್ರೋಹ
* ಮೀಸಲಾತಿ ಎಂಬುದು ನಮ್ಮ ಹಕ್ಕುಗಳಿಗಾಗಿ ಗೌರವ ಹಾಗೂ ಸಹಭಾಗಿತ್ವಕ್ಕೆ ನಡೆಸುವ ಹೋರಾಟ
* ಎಸ್‌ಸಿ ಎಸ್‌ಟಿ ಹಾಗೂ ಒಬಿಸಿಗಳ ಇತಿಹಾಸವನ್ನು ಅಳಿಸಿಹಾಕುವುದೇ 'ಹಿಂದುತ್ವ ಪ್ರಾಜೆಕ್ಟ್'ನ ಮೂಲಮಂತ್ರ
* ದೇಶದಲ್ಲಿ ಶೇ 90ರಷ್ಟು ಇರುವವರ ಇತಿಹಾಸ ನಮ್ಮ ಪಠ್ಯಪುಸ್ತಕಗಳಲ್ಲಿ ಏಕಿಲ್ಲ? ಶೇ 10ರಷ್ಟು ಜನರ ಇತಿಹಾಸವನ್ನು ಮಾತ್ರ ಪುಸ್ತಕಗಳಲ್ಲಿ ಉಲ್ಲೇಖಿಸಲಾಗಿದೆ ಏಕೆ? ಮೂರು ಸಾವಿರ ವರ್ಷಗಳ ಕಾಲ ದಲಿತರನ್ನು ಕೀಳಾಗಿ ಕಾಣಲಾಗಿದೆ. ಅವರಿಗೆ ಗೌರವ ನೀಡಿಲ್ಲ. ಸಮಾಜದಲ್ಲಿ ಅವರಿಗೆ ಯಾವ ಸ್ಥಾನವನ್ನೂ ನೀಡಿಲ್ಲ
ಆಕ್ಷೇಪಿಸಿದ್ದ ವಿ.ವಿ
ಮುಂಚಿತವಾಗಿ ಪ್ರಕಟಣೆ ನೀಡದೆಯೇ ವಿಶ್ವವಿದ್ಯಾಲಯದ ನಾರ್ತ್ ಕ್ಯಾಂಪಸ್‌ಗೆ ರಾಹುಲ್ ಗಾಂಧಿ ಮೇ 22ರಂದು ಭೇಟಿ ನೀಡಿದ್ದಕ್ಕೆ ದೆಹಲಿ ವಿಶ್ವವಿದ್ಯಾಲಯ ಆಕ್ಷೇಪ ವ್ಯಕ್ತಪಡಿಸಿತ್ತು. 'ರಾಹುಲ್ ಗಾಂಧಿ ಅವರ ಈ ನಡೆ ಶೈಕ್ಷಣಿಕ ಸಂಸ್ಥೆಯ ಶಿಷ್ಟಾಚಾರದ ಉಲ್ಲಂಘನೆ ಹಾಗೂ ವಿಶ್ವವಿದ್ಯಾಲಯ ಕಾರ್ಯಾಚರಣೆಗೆ ಅಡ್ಡಿ ಉಂಟು ಮಾಡುವಂಥದ್ದು' ಎಂದು ಆಗ ನೀಡಿದ್ದ ಪ್ರಕಟಣೆಯಲ್ಲಿ ವಿಶ್ವವಿದ್ಯಾಲಯ ಹೇಳಿತ್ತು. 'ವಿಶ್ವವಿದ್ಯಾಲಯಕ್ಕೆ ಯಾವುದೇ ಮಾಹಿತಿ ನೀಡದೇ ರಾಹುಲ್ ಗಾಂಧಿ ಅವರು ವಿ.ವಿ ಕ್ಯಾಂಪಸ್‌ಗೆ ಈ ರೀತಿ ಎರಡನೇ ಬಾರಿ ಬಂದಿದ್ದಾರೆ' ಎಂದಿತ್ತು. ಅಂದು ರಾಹುಲ್ ಗಾಂಧಿ ಅವರು ಡಿಯುಎಸ್‌ಯು ಅಧ್ಯಕ್ಷರ ಕಚೇರಿ ಆವರಣದಲ್ಲಿ ನಡೆದ ಸಂವಾದದಲ್ಲಿ ಪಾಲ್ಗೊಂಡಿದ್ದರು. ಡಿಯುಎಸ್‌ಯು ಕಾಂಗ್ರೆಸ್‌ನ ವಿದ್ಯಾರ್ಥಿ ಘಟಕವಾದ ಎನ್‌ಎಸ್‌ಯುಐ ಹಿಡಿತದಲ್ಲಿದೆ.




