ನವದೆಹಲಿ: ಭಾರತ ಮತ್ತು ಪಾಕಿಸ್ತಾನ ಕದನ ವಿರಾಮ ಒಪ್ಪಂದ ಮಾಡಿಕೊಂಡ ಬಳಿಕ ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟ್ರೋಲ್‌ಗಳಾಗಿದ್ದವು. ಈಗ ಮಿಸ್ರಿ ಬೆಂಬಲಿಸಿ ಹಲವು ನಾಯಕರು ಪೋಸ್ಟ್ ಹಂಚಿಕೊಂಡಿದ್ದಾರೆ.
ಮಾಜಿ ವಿದೇಶಾಂಗ ಕಾರ್ಯದರ್ಶಿ ನಿರುಪಮಾ ಮೆನನ್ ರಾವ್, ರಾಜಕಾರಣಿಗಳಾದ ಅಸಾದುದ್ದೀನ್ ಓವೈಸಿ, ಅಖಿಲೇಶ್ ಯಾದವ್ ಸೇರಿ ಹಲವರು ಮಿಸ್ರಿ ಪರ ನಿಂತಿದ್ದಾರೆ.
ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದು, 'ಕದನ ವಿರಾಮದ ಕುರಿತು ನಿರ್ಧಾರ ತೆಗೆದುಕೊಳ್ಳುವುದು ಸರ್ಕಾರದ ಜವಾಬ್ದಾರಿ, ಒಬ್ಬ ಅಧಿಕಾರಿಯದ್ದಲ್ಲ. ಕೆಲವು ಸಮಾಜ ವಿರೋಧಿ ಅಂಶಗಳು ಅಧಿಕಾರಿಗಳ ಮತ್ತು ಅವರ ಕುಟುಂಬದ ವಿರುದ್ಧ ನಿಂದನೀಯವಾಗಿ ಮಾತನಾಡುತ್ತಿದ್ದು, ಎಲ್ಲಾ ಮಿತಿಗಳನ್ನು ಮೀರುತ್ತಿವೆ. ಆದರೆ ಬಿಜೆಪಿ ಸರ್ಕಾರವಾಗಲಿ ಅಥವಾ ಅದರ ಯಾವುದೇ ಮಂತ್ರಿಗಳಾಗಲಿ ಅವರ ಗೌರವವನ್ನು ರಕ್ಷಿಸಲು, ಅಂತಹ ಅನಗತ್ಯ ಪೋಸ್ಟ್‌ಗಳನ್ನು ಮಾಡುವವರ ವಿರುದ್ಧ ಸಂಭವನೀಯ ಕ್ರಮದ ಬಗ್ಗೆ ಚರ್ಚಿಸಲು ಮುಂದೆ ಬರುತ್ತಿಲ್ಲ' ಎಂದು ಬರೆದುಕೊಂಡಿದ್ದಾರೆ.
ನಿರುಪಮಾ ಅವರು ಪೋಸ್ಟ್ ಹಂಚಿಕೊಂಡು, 'ಭಾರತ-ಪಾಕಿಸ್ತಾನ ಕದನ ವಿರಾಮದ ಘೋಷಣೆ ಮಾಡಿದ್ದಕ್ಕೆ ಮಿಸ್ರಿ ಮತ್ತು ಅವರ ಕುಟುಂಬವನ್ನು ಟ್ರೋಲ್ ಮಾಡುವುದು ನಿಜಕ್ಕೂ ನಾಚಿಕೆಗೇಡಿನ ವಿಷಯ. ಒಬ್ಬ ನಿಷ್ಠಾವಂತ ಅಧಿಕಾರಿಯಾಗಿರುವ ಮಿಸ್ರಿ, ವೃತ್ತಿಪರತೆ ಮತ್ತು ದೃಢನಿಶ್ಚಯದಿಂದ ಭಾರತಕ್ಕೆ ಸೇವೆ ಸಲ್ಲಿಸಿದ್ದಾರೆ, ಅವರನ್ನು ದೂಷಿಸುವುದಕ್ಕೆ ಯಾವುದೇ ಕಾರಣವಿಲ್ಲ. ಅವರ ಮಗಳನ್ನು ಅಪಹರಿಸುವ ಬೆದರಿಕೆ, ಅವರ ಪ್ರೀತಿಪಾತ್ರರನ್ನು ನಿಂದಿಸುವುದು ಸಭ್ಯತೆಯ ಮಿತಿಯನ್ನು ಮೀರುತ್ತದೆ. ಈ ವಿಷಕಾರಿ ದ್ವೇಷ ನಿಲ್ಲಬೇಕು - ನಮ್ಮ ರಾಜತಾಂತ್ರಿಕರ ಹಿಂದೆ ಒಗ್ಗಟ್ಟಿನಿಂದ ನಿಲ್ಲಬೇಕು' ಎಂದು ಹೇಳಿದ್ದಾರೆ.
'ವಿಕ್ರಮ್ ಮಿಸ್ರಿ ಅವರು ನಮ್ಮ ರಾಷ್ಟ್ರಕ್ಕಾಗಿ ಅವಿಶ್ರಾಂತವಾಗಿ ಕೆಲಸ ಮಾಡುವ ಸಭ್ಯ, ಪ್ರಾಮಾಣಿಕ ರಾಜತಾಂತ್ರಿಕ. ನಮ್ಮ ನಾಗರಿಕ ಸೇವಕರು ಕಾರ್ಯಾಂಗದ ಅಡಿಯಲ್ಲಿ ಕೆಲಸ ಮಾಡುತ್ತಾರೆ ಇದನ್ನು ನೆನಪಿನಲ್ಲಿಡಬೇಕು. ಕಾರ್ಯಾಂಗ ಅಥವಾ ನಮ್ಮ ದೇಶಕ್ಕಾಗಿ ತೆಗೆದುಕೊಳ್ಳುವ ನಿರ್ಧಾರಗಳಿಗೆ ಅವರನ್ನು ದೂಷಿಸಬಾರದು' ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸ್ ಹೇಳಿದ್ದಾರೆ.
ಘಟನೆ ಏನು?
ಮಿಸ್ರಿ ಅವರು ಭಾರತ ಪಾಕಿಸ್ತಾನ ಕದನ ವಿರಾಮಕ್ಕೆ ಒಪ್ಪಿಕೊಂಡಿರುವ ವಿಚಾರವನ್ನು ಮೇ.10 ಸುದ್ದಿಗೋಷ್ಠಿ ನಡೆಸಿ ಘೋಷಣೆ ಮಾಡಿದ್ದರು. ಅದಾದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಮಿಸ್ರಿ ವಿರುದ್ಧ ದೇಶ ದ್ರೋಹದ ಆರೋಪ ಹೊರಿಸಿದ್ದರು. ಜತೆಗೆ ಅವರ ಮಗಳ ವಿರುದ್ಧವೂ ನಿಂದನೀಯವಾಗಿ ಪೋಸ್ಟ್ ಹಂಚಿಕೊಂಡಿದ್ದರು.






