ಆಗ್ರಾ: ಸಮಾಜವಾದಿ ಪಕ್ಷದ ಸಂಸದ (ರಾಜ್ಯಸಭಾ ಸದಸ್ಯ) ರಾಮ್‌ಜಿ ಲಾಲ್ ಸುಮನ್ ಅವರು ಬುಧವಾರ ರಾಷ್ಟ್ರಪತಿ ದ್ರೌಪದಿ ಮುರ್ಮುಗೆ ಪತ್ರ ಬರೆದಿದ್ದು, ನನ್ನ ಹತ್ಯೆಗೆ ಸರ್ಕಾರವೇ ಪಿತೂರಿ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ರಾಮ್‌ಜಿ ಅವರು ಬರೆದಿರುವ ಪತ್ರ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ರಾಷ್ಟ್ರಪತಿಗೆ ಇಮೇಲ್ ಮೂಲಕ ಕಳುಹಿಸಿರುವ ಪತ್ರದಲ್ಲಿ, ನನ್ನ ಮೇಲೆ ಹಲವು ಸಲ ದಾಳಿ ಮಾಡಿದ್ದರೂ ಸರ್ಕಾರ ನನ್ನ ರಕ್ಷಣೆಗೆ ಮುಂದಾಗಿಲ್ಲ, ದಾಳಿ ಮಾಡಿದವರ ವಿರುದ್ಧ ಈವರೆಗೂ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಪತ್ರದಲ್ಲಿ ಹೇಳಿದ್ದಾರೆ.
ನನ್ನ ಸುರಕ್ಷತೆಗಾಗಿ ತಾವುಗಳು ರಾಜ್ಯ ಸರ್ಕಾರಕ್ಕೆ ಸೂಚಿಸಿಬೇಕು ಎಂದು ರಾಷ್ಟ್ರಪತಿ ಅವರನ್ನು ಪತ್ರದಲ್ಲಿ ಕೋರಿದ್ದಾರೆ.
ತಮ್ಮ ಜೀವಕ್ಕೆ ಬೆದರಿಕೆ ಮತ್ತು ಹಲವಾರು ದಾಳಿ ನಡೆದರೂ, ರಾಜ್ಯ ಆಡಳಿತದಿಂದ ರಕ್ಷಿತವಾಗಿರುವ ಆರೋಪಿತ ಅಪರಾಧಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರುವುದಾಗಿ ತಿಳಿಸಿದರು. ಅವರು ತಮ್ಮ ಸುರಕ್ಷತೆಗೆ ಖಾತರಿಯನ್ನೂ ಕೇಳಿದ್ದಾರೆ.
ಇಬ್ರಾಹಿಂ ಲೋಧಿ ಸೋಲಿಸಲು ಬಾಬರ್‌ನನ್ನು ಭಾರತಕ್ಕೆ ಕರೆತಂದವನು ದೇಶದ್ರೋಹಿ ರಾಣಾ ಸಾಂಗಾ (ಸಂಗ್ರಾಮ್ ಸಿಂಗ್) ಎಂದು ಸುಮನ್ ಇತ್ತೀಚೆಗೆ ರಾಜ್ಯಸಭೆಯಲ್ಲಿ ಹೇಳಿದ್ದರು. ರಾಮ್‌ಜಿ ಲಾಲ್ ಸುಮನ್ ಅವರ ಈ ಹೇಳೀಕೆ ವಿವಾದಕ್ಕೆ ಕಾರಣವಾಗಿತ್ತು. ಸುಮನ್ ಹೇಳಿಕೆ ಖಂಡಿಸಿ ವಿವಿಧ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದವು. ಕರ್ಣಿ ಸೇನೆಯ ಕಾರ್ಯಕರ್ತರು ಅವರ ನಿವಾಸದ ಮೇಲೆ ದಾಳಿ ಮಾಡಿದ್ದರು.




