ಪ್ರಯಾಣವನ್ನು ಇನ್ನಷ್ಟು ಸುಲಭಗೊಳಿಸುವ ನಿಟ್ಟಿನಲ್ಲಿ ಗೂಗಲ್ ಮ್ಯಾಪ್ಸ್ ತನ್ನ ಬಳಕೆದಾರರಿಗಾಗಿ 'ಸ್ಕ್ರೀನ್‌ಶಾಟ್ ಗುರುತಿಸುವಿಕೆ' (screenshot recognition) ಎಂಬ ಹೊಸ ವೈಶಿಷ್ಟ್ಯವನ್ನು ಇದೀಗ ಪರಿಚಯಿಸಿದೆ. ಈ ಹೊಸ ವೈಶಿಷ್ಟ್ಯವು ಕಳೆದ ಮಾರ್ಚ್ ತಿಂಗಳಲ್ಲಿ ಘೋಷಣೆಯಾಗಿತ್ತು. ಇದೀಗ ಈ ವೈಶಿಷ್ಟ್ಯವನ್ನು ಅಧಿಕೃತವಾಗಿ ಬಿಡುಗಡೆಗೊಳಿಸಲಾಗಿದ್ದು, ಈ ಹೊಸ ನವೀಕರಣವು ಬಳಕೆದಾರರು ಯಾವುದೇ ಸ್ಥಳದ ಬಗ್ಗೆ ಕೈಯಿಂದ ಬರೆದಿಟ್ಟುಕೊಳ್ಳುವ ಅಗತ್ಯವನ್ನು ತಪ್ಪಿಸುತ್ತದೆ. ಅಂದರೆ, ಗೂಗಲ್ ಮ್ಯಾಪ್ಸ್ ಬಳಕೆದಾರರು ಇದೀಗ ಕೇವಲ ಒಂದು ಸ್ಕ್ರೀನ್‌ಶಾಟ್ ತೆಗೆಯುವ ಮೂಲಕ ಅಡ್ರೆಸ್ ಅನ್ನು ಸೇವ್ ಮಾಡಿಕೊಳ್ಳಬಹುದಾಗಿದೆ.!
ಹೌದು, ಅಮೆರಿಕಾದ ಐಫೋನ್ ಬಳಕೆದಾರರಿಗಾಗಿ ಹೊಸದಾಗಿ ಸ್ಕ್ರೀನ್‌ಶಾಟ್ ಗುರುತಿಸುವಿಕೆ ವೈಶಿಷ್ಟ್ಯವನ್ನು ಇದೀಗ ಪರಿಚಯಿಸಲಾಗಿದ್ದು, ಈ ಸ್ಕ್ರೀನ್‌ಶಾಟ್ ಗುರುತಿಸುವಿಕೆ ವೈಶಿಷ್ಟ್ಯವು ಸ್ಕ್ರೀನ್‌ಶಾಟ್‌ಗಳಲ್ಲಿ ಕಾಣುವ ಸ್ಥಳಗಳನ್ನು ಸ್ಕ್ಯಾನ್ ಮಾಡಲು ಮತ್ತು ಅವುಗಳ ನಿರ್ದೇಶನಗಳೊಂದಿಗೆ ಮ್ಯಾಪ್ ಅನ್ನು ತೆರೆಯಲು ಜೆಮಿನಿ ತಂತ್ರಜ್ಞಾನದ ಸಹಾಯ ಪಡೆಯುತ್ತದೆ ಎಂದು ಗೂಗಲ್ ತನ್ನ ಇತ್ತೀಚಿನ ಬ್ಲಾಗ್ ಪೋಸ್ಟ್‌ನಲ್ಲಿ ವಿವರಿಸಿದೆ. ಬಳಕೆದಾರರು ಈ ಗುರುತಿಸಲಾದ ಸ್ಥಳಗಳನ್ನು ಗೂಗಲ್ ಮ್ಯಾಪ್ಸ್ ನಲ್ಲಿರುವ 'ನೀವು' ಎಂಬ ಟ್ಯಾಬ್‌ನ ಕೆಳಗೆ ರಚಿಸಲಾದ ಹೊಸ ಖಾಸಗಿ ಪಟ್ಟಿಯಲ್ಲಿ ಸೇವ್ ಮಾಡಬಹುದು
ಗೂಗಲ್ ತಿಳಿಸಿರುವಂತೆ, ಈ 'ಸ್ಕ್ರೀನ್‌ಶಾಟ್ ಗುರುತಿಸುವಿಕೆ' ಹೊಸ ನವೀಕರಣವು ಬಳಕೆದಾರರು ಯಾವುದೇ ಸ್ಥಳದ ಬಗ್ಗೆ ಕೈಯಿಂದ ಬರೆದಿಟ್ಟುಕೊಳ್ಳುವ ಅಗತ್ಯವನ್ನು ತಪ್ಪಿಸುತ್ತದೆ. ಹೀಗಾಗಿ, ಅವರು ಭೇಟಿ ನೀಡಲು ಬಯಸುವ ಸ್ಥಳಗಳನ್ನು ಸುಲಭವಾಗಿ ಟ್ರ್ಯಾಕ್ ಮಾಡಬಹುದು ಮತ್ತು ತಮ್ಮ ಪ್ರವಾಸಗಳನ್ನು ಹೆಚ್ಚು ಸರಾಗವಾಗಿ ಯೋಜಿಸಬಹುದು. ಈ ವೈಶಿಷ್ಟ್ಯವು ಪ್ರಸ್ತುತ ಅಮೆರಿಕಾದಾದ್ಯಂತ ಎಲ್ಲಾ ಐಫೋನ್ ಬಳಕೆದಾರರಿಗೆ ಹಂತ ಹಂತವಾಗಿ ಬಿಡುಗಡೆ ಮಾಡಲಾಗುತ್ತಿದೆ. ಸದ್ಯಕ್ಕೆ ಲಭ್ಯವಿರುವ ಮಾಹಿತಿಯ ಪ್ರಕಾರ, ಇದು ಪ್ರಯಾಣ ಯೋಜನೆಗೆ ಹೊಸ ಆಯಾಮವನ್ನು ನೀಡಲಿದೆ.

ಸ್ಕ್ರೀನ್‌ಶಾಟ್‌ಗಳನ್ನು ಸ್ವಯಂಚಾಲಿತವಾಗಿ ಹುಡುಕುವ ಮತ್ತು ಅವುಗಳನ್ನು ಬಳಕೆದಾರರಿಗಾಗಿ ಒಂದು ಕ್ಯಾರೋಸೆಲ್‌ನಲ್ಲಿ ಇರಿಸುವ ಸಾಮರ್ಥ್ಯವನ್ನು ಈ ಫೀಚರ್ ಪಡೆದುಕೊಂಡಿದೆ. ಈ ವೈಶಿಷ್ಟ್ಯವನ್ನು ಬಳಸಲು, ಬಳಕೆದಾರರು ತಮ್ಮ ಫೋಟೋಗಳಿಗೆ ಗೂಗಲ್ ಮ್ಯಾಪ್ಸ್ ಪ್ರವೇಶವನ್ನು ನೀಡಬೇಕಾಗುತ್ತದೆ. ಇಲ್ಲದಿದ್ದರೆ, ಅವರು ಸ್ಕ್ಯಾನ್ ಮಾಡಲು ಬಯಸುವ ಚಿತ್ರಗಳನ್ನು ಹಸ್ತಚಾಲಿತವಾಗಿ ಆಯ್ಕೆ ಮಾಡಿಕೊಳ್ಳಬಹುದು. ಗಮನಿಸಬೇಕಾದ ಅಂಶವೆಂದರೆ, ಈ ವೈಶಿಷ್ಟ್ಯವು ಪೂರ್ವನಿಯೋಜಿತವಾಗಿ ನಿಷ್ಕ್ರಿಯವಾಗಿರುತ್ತದೆ ಮತ್ತು ಬಳಕೆದಾರರು ತಮ್ಮ ಗ್ಯಾಲರಿಗೆ ಪ್ರವೇಶವನ್ನು ನೀಡಿದ ನಂತರವಷ್ಟೇ ಕಾರ್ಯನಿರ್ವಹಿಸುತ್ತದೆ.
ಈ ಹೊಸ ಗೂಗಲ್ ಮ್ಯಾಪ್ಸ್ ವೈಶಿಷ್ಟ್ಯವನ್ನು ಸಕ್ರಿಯಗೊಳಿಸಲು, ಐಫೋನ್ ಬಳಕೆದಾರರು ತಮ್ಮ ಗೂಗಲ್ ನಕ್ಷೆಗಳ ಅಪ್ಲಿಕೇಶನ್‌ನಲ್ಲಿರುವ 'ನೀವು' ಟ್ಯಾಬ್‌ಗೆ ಹೋಗಿ, ಅಲ್ಲಿ ಕಾಣುವ ಸ್ಕ್ರೀನ್‌ಶಾಟ್‌ಗಳ ಪಟ್ಟಿಯ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ. ನಂತರ, ಅಪ್ಲಿಕೇಶನ್ ಫೋಟೋಗಳ ಲೈಬ್ರರಿಗೆ ಪ್ರವೇಶವನ್ನು ಕೋರುತ್ತದೆ. ಅನುಮತಿ ನೀಡಿದ ನಂತರ, ಗೂಗಲ್ ನಕ್ಷೆಗಳು ಸ್ಥಳಗಳಿಗಾಗಿ ಸ್ಕ್ರೀನ್‌ಶಾಟ್‌ಗಳನ್ನು ಸ್ಕ್ಯಾನ್ ಮಾಡಲು ಪ್ರಾರಂಭಿಸುತ್ತದೆ. ಸ್ಥಳಗಳು ಪತ್ತೆಯಾದ ತಕ್ಷಣ, ಆ ಪಟ್ಟಿಯಲ್ಲಿರುವ ಸ್ಥಳಗಳನ್ನು ಪರಿಶೀಲಿಸಲು ಮತ್ತು ಉಳಿಸಲು ಬಳಕೆದಾರರಿಗೆ ಒಂದು ಸಂದೇಶವು ಕಾಣಿಸುತ್ತದೆ.
ಪ್ರಸ್ತುತವಾಗಿ, ಈ ಉಪಯುಕ್ತ ವೈಶಿಷ್ಟ್ಯವು ಕೇವಲ ಅಮೆರಿಕಾದ (ಯುಎಸ್) ಐಒಎಸ್ (iOS) ಬಳಕೆದಾರರಿಗೆ ಮಾತ್ರ ಲಭ್ಯವಿದೆ. ಆದರೆ, ಶೀಘ್ರದಲ್ಲೇ ಇದು ವಿಶ್ವದಾದ್ಯಂತ ಎಲ್ಲ ಬಳಕೆದಾರರಿಗೂ ಲಭ್ಯವಾಗುವ ನಿರೀಕ್ಷೆಯಿದೆ. ಇನ್ನು ಈ ಹೊಸತನವು ಪ್ರಯಾಣದ ಯೋಜನೆಗಳನ್ನು ಇನ್ನಷ್ಟು ಸುಲಭ ಮತ್ತು ವ್ಯವಸ್ಥಿತಗೊಳಿಸುತ್ತದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ ಎನ್ನಬಹುದು. ಈ ಕುರಿತಂತೆ ನಿಮ್ಮ ಅಭಿಪ್ರಾಯವೇನು ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.





