ತಿರುವನಂತಪುರಂ: ಕೇರಳದ ಅಭಿವೃದ್ಧಿ ವೇಗವನ್ನು ಮತ್ತಷ್ಟು ಬಲಪಡಿಸುವ ನಿರೀಕ್ಷೆಯಿರುವ ಪ್ರತಿಷ್ಠಿತ ಯೋಜನೆಯಾದ ವಿಳಿಂಜಂ ಅಂತರರಾಷ್ಟ್ರೀಯ ಬಂದರನ್ನು ಪ್ರಧಾನಿ ನರೇಂದ್ರ ಮೋದಿ ನಾಳೆ(ಮೇ.2) ರಾಷ್ಟ್ರಕ್ಕೆ ಅರ್ಪಿಸಲಿದ್ದಾರೆ. ವಿಳಿಂಜಂ ಅಂತರಾಷ್ಟ್ರೀಯ ಬಂದರಿನ ಮೊದಲ ಹಂತದ ಕಾರ್ಯಾರಂಭ ಶುಕ್ರವಾರ ನಡೆಯಲಿದೆ.
ಇಂದು(ಗುರುವಾರ) ರಾತ್ರಿ ತಿರುವನಂತಪುರಂಗೆ ಆಗಮಿಸಲಿರುವ ಪ್ರಧಾನಿ, ರಾಜಭವನದಲ್ಲಿ ವಾಸ್ತವ್ಯ ಹೂಡಿ, ನಂತರ ನಾಳೆ ಬೆಳಿಗ್ಗೆ 10.15 ಕ್ಕೆ ಹೆಲಿಕಾಪ್ಟರ್ ಮೂಲಕ ವಿಳಿಂಜಂ ಬಂದರಿಗೆ ಆಗಮಿಸಲಿದ್ದಾರೆ.
ಬಂದರು ಕಾರ್ಯಾಚರಣೆ ಕೇಂದ್ರಕ್ಕೆ ಭೇಟಿ ನೀಡಿ ಚಟುವಟಿಕೆಗಳನ್ನು ನಿರ್ಣಯಿಸಿದ ನಂತರ, ಪ್ರಧಾನ ಮಂತ್ರಿ ಅವರು 11ನೇ ಬರ್ತ್‍ಗೆ ಭೇಟಿ ನೀಡಿ ಬಂದರನ್ನು ರಾಷ್ಟ್ರಕ್ಕೆ ಅರ್ಪಿಸಲಿದ್ದಾರೆ. ಹನ್ನೆರಡು ಗಂಟೆಗೆ ಹಿಂತಿರುಗುವರು.
ಬಂದರಿನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಬಂದರು ಸಚಿವ ವಿ.ಎನ್. ವಾಸವನ್ ಭಾಗವಹಿಸಲಿದ್ದಾರೆ. ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೆಕರ್, ಕೇಂದ್ರ ಸಚಿವ ಸರ್ಬಾನಂದ ಸೋನೋವಾಲ್, ವಿರೋಧ ಪಕ್ಷದ ನಾಯಕ ವಿಡಿ ಸತೀಶನ್, ಕೇಂದ್ರ ರಾಜ್ಯ ಸಚಿವರಾದ ಸುರೇಶ್ ಗೋಪಿ, ಜಾರ್ಜ್ ಕುರಿಯನ್ ಮತ್ತು ಸಂಸದ ಶಶಿ ತರೂರ್ ಅವರನ್ನೂ ಆಹ್ವಾನಿಸಲಾಗಿದೆ.






