ಕಾಸರಗೋಡು: ಜಿಲ್ಲೆಯಲ್ಲಿ ಗಾಳಿಯಿಂದ ಕೂಡಿದ ಬಿರುಸಿನ ಮಳೆಯಾಗುತ್ತಿದ್ದು, ವಿದ್ಯುತ್ ಸಂಪರ್ಕ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಪೆರ್ಲ ವಿದ್ಯುತ್ ಸಬ್‍ಸ್ಟೇಶನ್ ವ್ಯಾಪ್ತಿಯಲ್ಲಿ ಕಳೆದ 24ತಾಸುಗಳಿಂದ ವಿದ್ಯುತ್ ಸಂಚಾರ ಸ್ಥಗಿತಗೊಂಡಿದ್ದು, ಇದರಿಂದ ವ್ಯಾಪಕ ಸಮಸ್ಯೆ ಎದುರಿಸುವಂತಾಗಿತ್ತು. ತಗ್ಗು ಪ್ರದೇಶಗಳಲ್ಲಿ ನೀರು ತುಂಬಿಕೊಂಡಿರುವ ಹಿನ್ನೆಲೆಯಲ್ಲಿ ಹೊಳೆದಡದಲ್ಲಿರುವವರು ಆತಂಕದಲ್ಲಿ ಕಾಲ ಕಳೆಯುವಂತಾಗಿದೆ. ಕಾಸರಗೋಡು ಜಿಲ್ಲೆಯಲ್ಲಿ ಮೇ 26ರಂದು ರೆಡ್ ಅಲರ್ಟ್ ಘೋಷಿಸಲಾಗಿದೆ.
ಕಾಸರಗೋಡು, ಕಣ್ಣೂರು, ವಯನಾಡ್, ಕೋಯಿಕ್ಕೋಡ್, ಮಲಪ್ಪುರಂ ಜಿಲ್ಲೆಗಳಲ್ಲಿ ಭಾನುವಾರ ರೆಡ್ ಅಲರ್ಟ್ ಘೋಷಿಸಲಾಗಿತ್ತು. ಕಾಸರಗೋಡು ಸಏರಿದಂತೆ ಕೇರಳದ ವಿವಿಧ ಜಿಲ್ಲೆಗಳಲ್ಲಿ ಮೇ 28ರ ವರೆಗೆ ಭಾರೀ ಮಳೆಯಾಗುವ ಸಾಧ್ಯತೆ ಬಗ್ಗೆ ಕೇಂದ್ರ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮೇ 26ರಂದು ರಾತ್ರಿ 8.30 ರವರೆಗೆ ಕೇರಳ ಸಮುದ್ರದಲ್ಲಿ 3.0 ರಿಂದ 4.2 ಮೀಟರ್ ಎತ್ತರದ ಅಲೆಗಳು ಮತ್ತು ಇದರಿಂದ ಭಾರೀ ಸಮುದ್ರ ಕೊರೆತ ಸಂಭವಿಸುವ ಸಾಧ್ಯತೆಯಿದೆ ಎಂದು ರಾಷ್ಟ್ರೀಯ ಸಾಗರಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ (IಓಅಔIS) ಪ್ರಕಟಿಸಿದೆ.
ಮೇ 25ರಿಂದ 29ರ ವರೆಗೆ ಕೇರಳ-ಕರ್ನಾಟಕ-ಲಕ್ಷದ್ವೀಪ ಕರಾವಳಿಯಲ್ಲಿ ಬಲವಾದ ಗಾಳಿ ಮತ್ತು ಕೆಟ್ಟ ಹವಾಮಾನದ ಸಾಧ್ಯತೆ ಇದ್ದು, ಗಂಟೆಗೆ 35 ರಿಂದ 45 ಕಿ.ಮೀ ವೇಗದಲ್ಲಿ ಮತ್ತು ಕೆಲವೊಮ್ಮೆ ಗಂಟೆಗೆ 55 ಕಿ.ಮೀ ವೇಗದಲ್ಲಿ ಬೀಸುವ ಸಾಧ್ಯತೆಯಿದೆ.
ಕರಾವಳಿಯ ಮೀನುಗಾರರು ಮತ್ತು ಕರಾವಳಿ ನಿವಾಸಿಗಳು ಹೆಚ್ಚಿನ ಜಾಗರೂಕತೆ ಪಾಲಿಸುವಂತೆ ಸೂಚಿಸಲಾಗಿದೆ. ಸಮುದ್ರದ ಅಲೆಗಳು ತೀವ್ರಗೊಳ್ಳುವ ಸಾಧ್ಯತೆಯಿರುವುದರಿಂದ, ಕರಾವಳಿ ನಿವಾಸಿಗಳು ಅಪಾಯಕಾರಿ ವಲಯಗಳಿಂದ ದೂರವಿರಬೇಕು ಮತ್ತು ಅಧಿಕಾರಿಗಳ ಸೂಚನೆಗಳನ್ನು ಪಾಲಿಸಬೇಕು. ಈ ಸಮಯದಲ್ಲಿ ಸಣ್ಣ ದೋಣಿಗಳು ಮತ್ತು ವಿಹಾರ ದೋಣಿಗಳನ್ನು ಸಮುದ್ರಕ್ಕೆ ಇಳಿಸುವುದನ್ನು ತಪ್ಪಿಸಬೇಕು ಎಂದೂ ತಿಳಿಸಲಾಗಿದೆ.
ಐಎನ್‍ಸಿಓಐಎಸ್ ಎಚ್ಚರಿಕೆ ಸಂದೇಶ ಹಿಂತೆಗೆದುಕೊಳ್ಳುವಲ್ಲಿ ವರೆಗೆ ಕಡಲತೀರ ಕೇಂದ್ರೀಕೃತ ಪ್ರವಾಸೋದ್ಯಮ ಸೇರಿದಂತೆ ಎಲ್ಲಾ ಚಟುವಟಿಕೆ ಸ್ಥಗಿತಗೊಳಿಸಬೇಕು. ಬಂದರಿನಲ್ಲಿ ಮೀನುಗಾರಿಕಾ ಹಡಗುಗಳನ್ನು (ದೋಣಿಗಳು, ವಿಹಾರ ನೌಕೆಗಳು, ಇತ್ಯಾದಿ) ಸುರಕ್ಷಿತವಾಗಿ ಬಿಗಿಯುವುದರ ಜತೆಗೆ ದೋಣಿಗಳ ನಡುವೆ ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳುವುದರಿಂದ ಘರ್ಷಣೆಯ ಅಪಾಯ ತಪ್ಪಿಸುವಂತೆಯೂ ಸೂಚಿಸಲಾಗಿದೆ.


