ಟೊರೆಂಟೊ: ಕೆನಡಾದ ಟೊರೊಂಟೊದ ಮಾಲ್ಟನ್ ಗುರುದ್ವಾರದಲ್ಲಿ ಖಾಲಿಸ್ತಾನಿ ಪರ ಹೋರಾಟಗಾರರು ಹಿಂದೂ ವಿರೋಧಿ ಪ್ರತಿಭಟನೆ ನಡೆಸಿದ್ದಾರೆ. ಇದು ನೂತನ ಪ್ರಧಾನಿ ಮಾರ್ಕ್ ಕಾರ್ನಿ ಅವರ ಖಾಲಿಸ್ತಾನಿ ಉಗ್ರವಾದದ ಬಗೆಗಿನ ಧೋರಣೆಯ ಕುರಿತು ಚರ್ಚೆಯನ್ನು ಮತ್ತೆ ಹುಟ್ಟುಹಾಕಿದೆ ಎಂದು ವರದಿ ತಿಳಿಸಿದೆ.
ಕೆನಡಾದ ಪತ್ರಕರ್ತ ಡೇನಿಯಲ್ ಬೋರ್ಡ್‌ಮನ್ ಭಾನುವಾರ ನಡೆದ ಹಿಂದೂ ವಿರೋಧಿ ಪ್ರತಿಭಟನಾ ಮೆರವಣಿಗೆಯ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಕೆನಡಾದ ಹೊಸ ಪ್ರಧಾನಿ ಮಾರ್ಕ್ ಕಾರ್ನಿ ಖಾಲಿಸ್ತಾನಿಗಳೊಂದಿಗೆ ವ್ಯವಹರಿಸುವಾಗ ಮಾಜಿ ಪ್ರಧಾನಿ ಜಸ್ಟಿನ್ ಟ್ರುಡೊಗಿಂತ ಭಿನ್ನವಾಗಿರುತ್ತಾರೆಯೇ ಎಂದು ಪ್ರಶ್ನಿಸಿದ್ದಾರೆ.
ಮಾಲ್ಟನ್ ಗುರುದ್ವಾರ ದಲ್ಲಿರುವ ಕೆ-ಗ್ಯಾಂಗ್, ಟ್ರಿನಿಡಾಡ್, ಗಯಾನಾ, ಸುರಿನಾಮ್, ಜಮೈಕಾ, ದಕ್ಷಿಣ ಆಫ್ರಿಕಾ, ನೆದರ್‌ಲ್ಯಾಂಡ್ಸ್, ಮಲೇಷ್ಯಾ, ಶ್ರೀಲಂಕಾ, ಸಿಂಗಪುರ, ಕೀನ್ಯಾದಲ್ಲಿನ 8,00,000 ಹಿಂದೂಗಳನ್ನು ಹಿಂದೂಸ್ತಾನಕ್ಕೆ ಗಡೀಪಾರು ಮಾಡಬೇಕೆಂದು ನಾಚಿಕೆಯಿಲ್ಲದೆ ಒತ್ತಾಯಿಸಿದೆ. ಇದು ಭಾರತದ ಸರ್ಕಾರದ ವಿರುದ್ಧದ ಪ್ರತಿಭಟನೆಯಲ್ಲ. ಇದು ಸ್ಪಷ್ಟವಾಗಿ ಹಿಂದೂ ವಿರೋಧಿ ದ್ವೇಷವಾಗಿದೆ ಎಂದು ಅವರು ಹೇಳಿದ್ದಾರೆ.
ಕೆನಡಾದ ಪ್ರಧಾನಿ ಮಾರ್ಕ್ ಕಾರ್ನಿ ಮತ್ತು ಆಡಳಿತಾರೂಢ ಲಿಬರಲ್ ಪಕ್ಷವು ರಾಷ್ಟ್ರೀಯ ಚುನಾವಣೆಗಳಲ್ಲಿ ಗೆಲುವು ಸಾಧಿಸಿದ ಕೆಲವೇ ದಿನಗಳ ನಂತರ ಟೊರೊಂಟೊದಲ್ಲಿ ಹಿಂದೂ ವಿರೋಧಿ ಪ್ರತಿಭಟನೆ ನಡೆದಿದೆ.
ಕಾರ್ನಿ ಸಂಸತ್ತನ್ನು ವಿಸರ್ಜಿಸಿ ಹೊಸ ಜನಾದೆಶಕ್ಕಾಗಿ ಚುನಾವಣೆ ಬಯಸಿದ್ದರಿಂದ ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಚುನಾವಣೆ ನಡೆದಿತ್ತು. ಜಸ್ಟಿನ್ ಟ್ರುಡೊ ರಾಜೀನಾಮೆ ಬಳೊಕ ಕಾರ್ನಿ ಅಧಿಕಾರ ವಹಿಸಿಕೊಂಡಿದ್ದರು.
ಏಪ್ರಿಲ್ ಆರಂಭದಲ್ಲಿ, ಬ್ರಿಟಿಷ್ ಕೊಲಂಬಿಯಾದ ಸರ್ರೆಯಲ್ಲಿರುವ ಲಕ್ಷ್ಮಿ ನಾರಾಯಣ ದೇವಸ್ಥಾನವನ್ನು ಮೂರನೇ ಬಾರಿಗೆ ಧ್ವಂಸಗೊಳಿಸಲಾಗಿದೆ ಎಂದೂ ಡೇನಿಯಲ್ ಬೋರ್ಡ್‌ಮನ್ ಆರೋಪಿಸಿದ್ದಾರೆ.
ಕಟ್ಟಡದ ಗೋಡೆಗಳನ್ನು ಖಾಲಿಸ್ತಾನದ ಪರ ಗೀಚುಬರಹದಿಂದ ವಿರೂಪಗೊಳಿಸಲಾಗಿದೆ ಮತ್ತು ಭದ್ರತಾ ಕ್ಯಾಮೆರಾವನ್ನು ಕದ್ದಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.




