ಕಾಸರಗೋಡು: ಕೇರಳ ಸಂಗೀತ ನಾಟಕ ಅಕಾಡೆಮಿಯ ಮಾಜಿ ಕಾರ್ಯದರ್ಶಿ ಹಾಗೂ ಕಾಸರಗೋಡಿನ ಸಾಂಸ್ಕøತಿಕ ವ್ಯಕ್ತಿತ್ವದ ಪಿ. ಅಪ್ಪುಕುಟ್ಟನ್ ಮಾಸ್ಟರ್ ಸ್ಮರಣಾರ್ಥ ಎರಡು ದಿನಗಳ ನಾಟಕೋತ್ಸವ ಮೇ 23ಹಾಗೂ 24ರಂದು ಕಾಸರಗೋಡು ವಿದ್ಯಾನಗರದ ಚಿನ್ಮಯ ತೇಜಸ್ ಸಭಾಂಗಣದಲ್ಲಿ ನಡೆಯಲಿರುವುದು. ಕೇರಳ ಸಂಗೀತ ನಾಟಕ ಅಕಾಡೆಮಿ ಮತ್ತು ಕಾಸರಗೋಡು ಥಿಯೇಟ್ರಿಕ್ಸ್ ಸೊಸೈಟಿಯ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಲಿರುವುದು. ಕನ್ನಡ ಮತ್ತು ಮಲಯಾಳದಲ್ಲಿ ತಲಾ ಒಂದು ನಾಟಕ ಪ್ರದರ್ಶನಗೊಳ್ಳಲಿರುವುದಾಗಿ ಕಾಸರಗೋಡು ರಂಗಭೂಮಿ ಸಂಘಟನೆ ಕಾರ್ಯದರ್ಶಿ ಟಿ.ಎ. ಶಾಫಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ನಾಟಕೋತ್ಸವವನ್ನು ಮೇ 23 ರಂದು ಸಂಜೆ 5.30 ಕ್ಕೆ ಕೇರಳ ಸಂಗೀತ ನಾಟಕ ಅಕಾಡೆಮಿಯ ಅಧ್ಯಕ್ಷ, ಪದ್ಮಶ್ರೀ ಮಟ್ಟನ್ನೂರ್ ಶಂಕರಕುಟ್ಟಿ ಉದ್ಘಾಟಿಸುವರು. ಕೇರಳ ಸಂಗೀತ ನಾಟಕ ಅಕಾಡೆಮಿ ಸದಸ್ಯ ಇ.ಪಿ. ರಾಜಗೋಪಾಲನ್ ಅಧ್ಯಕ್ಷತೆ ವಹಿಸುವರು. ಕಾಸರಗೋಡು ರಂಗಭೂಮಿ ಸಂಘದ ಕಾರ್ಯದರ್ಶಿ ಟಿ.ಎ. ಶಾಫಿ, ರಾಜಮೋಹನ್ ನೀಲೇಶ್ವರ, ಕೇರಳ ಸಂಗೀತ ನಾಟಕ ಅಕಾಡೆಮಿಯ ಸದಸ್ಯ ಮತ್ತು ಖ್ಯಾತ ನಾಟಕಕಾರ, ಮತ್ತು ಚಲನಚಿತ್ರ ನಟ ಸಂತೋಷ್ ಕೀಯತ್ತೂರು, ಮಹಾಕವಿ ಮಂಜೇಶ್ವರಂ ಗೋವಿಂದ ಪೈ ಸ್ಮಾರಕ ಸಮಿತಿ ಕಾರ್ಯದರ್ಶಿ ಉಮೇಶ್ ಸಾಲಿಯಾನ್, ಕಾಸರಗೋಡು ಥಿಯೇಟ್ರಿಕಲ್ ಸೊಸೈಟಿ ಉಪಾಧ್ಯಕ್ಷ ಜಿ.ಬಿ. ವತ್ಸನ್, ಕೇರಳ ಸಂಗೀತ ನಾಟಕ ಅಕಾಡೆಮಿ ಜಿಲ್ಲಾ ಕೇಂದ್ರ ಕಲಾ ಸಮಿತಿ ಕಾರ್ಯದರ್ಶಿ ಪಿ.ವಿ. ರಾಜನ್ ಪಾಲ್ಗೊಳ್ಳುವರು. ಸಂಜೆ 6.30ಕ್ಕೆ ಸಂಕಲ್ಪ ಮೈಸೂರು ಪ್ರಸ್ತುತ ಪಡಿಸುವ, ಹುಲಿಗೆಪ್ಪ ಕಟ್ಟಿಮನಿ ನಿರ್ದೇಶನದ 'ಜೊತೆಗಿರುವನು ಚಂದಿರ' ಕನ್ನಡ ನಾಟಕ ಪ್ರದರ್ಶನಗೊಳ್ಳಲಿದೆ.
24ರಂದು ಸಂಜೆ 6.30ಕ್ಕೆ ಸುರೇಶ್ ಬಾಬು ಶ್ರೀಸ್ತ ಅವರ ಚಿತ್ರಕಥೆ ಮತ್ತು ಸಂತೋಷ್ ಕೀಳತ್ತೂರು ನಿರ್ದೇಶಿಸಿ ನಟಿಸಿರುವ 'ಪೆಣ್ ನಟನ್' ಎಂಬ ಮಲಯಾಳಂ ನಾಟಕವನ್ನು ಪ್ರದರ್ಶಿಸಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠೀಯಲ್ಲಿ ಸಂಘಟನೆ ಉಪಾಧ್ಯಕ್ಷ ಜಿ.ಬಿ. ವಲ್ಸನ್, ಸದಸ್ಯರಾದ ಉಮೇಶ್ ಸಾಲಿಯಾನ್ ಮತ್ತು ಸುಬಿನ್ ಜೋಸ್ ಉಪಸ್ಥಿತರಿದ್ದರು.





