HEALTH TIPS

ಅಗ್ಗವಾಗಲಿದೆ ಬ್ರಿಟನ್ನಿನ ಸ್ಕಾಚ್ ವಿಸ್ಕಿ, ಕಾರು!

ಲಂಡನ್: ಮುಕ್ತ ವ್ಯಾಪಾರ ಒಪ್ಪಂದ (ಎಫ್‌ಟಿಎ) ಅಂತಿಮಗೊಂಡಿದೆ ಎಂದು ಭಾರತ ಮತ್ತು ಬ್ರಿಟನ್ ಮಂಗಳವಾರ ಹೇಳಿವೆ. ಈ ಒಪ್ಪಂದದ ಪರಿಣಾಮವಾಗಿ ಬ್ರಿಟನ್ನಿನ ಸ್ಕಾಚ್ ವಿಸ್ಕಿ ಮತ್ತು ಕಾರುಗಳು ಭಾರತದಲ್ಲಿ ಅಗ್ಗವಾಗಲಿವೆ. ಅಲ್ಲದೆ, ಬ್ರಿಟನ್ನಿನಲ್ಲಿ ಮಾರಾಟ ಆಗುವ ಭಾರತದ ಜವಳಿ ಮತ್ತು ಚರ್ಮದ ಉತ್ಪನ್ನಗಳ ಮೇಲಿನ ಸುಂಕ ಕಡಿಮೆ ಆಗಲಿದೆ.

ಎಫ್‌ಟಿಎ ಅಂತಿಮ ಆಗಿರುವುದಾಗಿ ಬ್ರಿಟನ್ ಪ್ರಧಾನಿ ಕಿಯರ್ ಸ್ಟಾರ್ಮರ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಪ್ರಕಟಿಸಿದ್ದಾರೆ. ಎರಡೂ ದೇಶಗಳ ನಡುವಿನ ಪ್ರಸ್ತಾವಿತ ದ್ವಿಪಕ್ಷೀಯ ಹೂಡಿಕೆ ಒಪ್ಪಂದ ಕುರಿತ ಮಾತುಕತೆಗಳು ಮುಂದುವರಿದಿವೆ.

ಒಪ್ಪಂದದ ಪ್ರಕಾರ ಭಾರತವು ಬ್ರಿಟನ್ನಿನ ವಿಸ್ಕಿ ಮತ್ತು ಜಿನ್‌ ಮೇಲಿನ ಸುಂಕವನ್ನು ಈಗಿರುವ ಶೇ 150ರ ಬದಲು ಶೇ 75ಕ್ಕೆ ತಗ್ಗಿಸಲಿದೆ. ಒಪ್ಪಂದದ ಹತ್ತನೆಯ ವರ್ಷದಲ್ಲಿ ಈ ಸುಂಕದ ಪ್ರಮಾಣವು ಶೇ 40ಕ್ಕೆ ಇಳಿಕೆ ಆಗಲಿದೆ. ಮೋಟಾರು ವಾಹನ ಉತ್ಪನ್ನಗಳ ಮೇಲಿನ ಸುಂಕವು ಈಗಿನ ಶೇ 100ರಷ್ಟರ ಬದಲು ಶೇ 10ಕ್ಕೆ ಇಳಿಕೆ ಆಗಲಿದೆ. ಆದರೆ ಇದಕ್ಕೆ ಕೋಟಾ ಮಿತಿ ಇರಲಿದೆ.

ಭಾರತದ ಶೇಕಡ 99ರಷ್ಟು ಉತ್ಪನ್ನ ವರ್ಗಗಳ ಮೇಲಿನ ತೆರಿಗೆಯು ಇಲ್ಲವಾಗಲಿದೆ. ಇದರಿಂದಾಗಿ ಭಾರತಕ್ಕೆ ಪ್ರಯೋಜನ ಆಗಲಿದೆ. ಎಫ್‌ಟಿಎ ಕಾರಣದಿಂದಾಗಿ ಎರಡೂ ದೇಶಗಳ ನಡುವಿನ ದ್ವಿಪಕ್ಷೀಯ ವ್ಯಾಪಾರದ ಮೊತ್ತವು 2030ರ ವೇಳೆಗೆ ದುಪ್ಪಟ್ಟಾಗುವ ನಿರೀಕ್ಷೆ ಇದೆ.

ಸರ್ಕಾರದ ಮಟ್ಟದಲ್ಲಿನ ಅಂದಾಜಿನ ಪ್ರಕಾರ ಈ ಒಪ್ಪಂದದಿಂದಾಗಿ ಬ್ರಿಟನ್ನಿನ ಅರ್ಥ ವ್ಯವಸ್ಥೆಯ ಮೌಲ್ಯ 2040ರ ವೇಳೆಗೆ ವಾರ್ಷಿಕ 4.8 ಶತಕೋಟಿ ಜಿಬಿಪಿಯಷ್ಟು (ಗ್ರೇಟ್‌ ಬ್ರಿಟನ್ ಪೌಂಡ್‌) ಹೆಚ್ಚಲಿದೆ.

'ಭಾರತ ಮತ್ತು ಬ್ರಿಟನ್ ಮಹತ್ವಾಕಾಂಕ್ಷೆಯ ಹಾಗೂ ಇಬ್ಬರಿಗೂ ಅನುಕೂಲ ಆಗುವ ದ್ವಿಪಕ್ಷೀಯ ವ್ಯಾಪಾರ ಒಪ್ಪಂದವನ್ನು ಅಂತಿಮಗೊಳಿಸಿವೆ. ಇದು ಐತಿಹಾಸಿಕ ಮೈಲಿಗಲ್ಲು...' ಎಂದು ಮೋದಿ ಅವರು ಎಕ್ಸ್‌ ಮೂಲಕ ತಿಳಿಸಿದ್ದಾರೆ. 'ಪ್ರಧಾನಿ ಸ್ಟಾರ್ಮರ್ ಅವರನ್ನು ಭಾರತಕ್ಕೆ ಸ್ವಾಗತಿಸುವುದನ್ನು ನಾನು ಎದುರುನೋಡುತ್ತಿದ್ದೇನೆ' ಎಂದು ಕೂಡ ಮೋದಿ ಹೇಳಿದ್ದಾರೆ.

ಐರೋಪ್ಯ ಒಕ್ಕೂಟದಿಂದ ಹೊರಬಂದ ನಂತರದಲ್ಲಿ ಬ್ರಿಟನ್ ಮಾಡಿಕೊಂಡಿರುವ ಅತಿದೊಡ್ಡ ಒಪ್ಪಂದ ಇದು ಎಂದು ಸ್ಟಾರ್ಮರ್ ಹೇಳಿದ್ದಾರೆ. ಒಪ್ಪಂದವು ಅನುಷ್ಠಾನಕ್ಕೆ ಬರುವ ಮೊದಲು ಇದಕ್ಕೆ ಬ್ರಿಟನ್ ಸಂಸತ್ತು ಅನುಮೋದನೆ ನೀಡಬೇಕಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries