ಜಮ್ಮು ಮತ್ತು ಕಾಶ್ಮೀರ: ಕಣಿವೆ ರಾಜ್ಯ ಕಾಶ್ಮೀರದಲ್ಲಿ ಅಕಾಲಿಕವಾಗಿ ತೀವ್ರ ಬಿಸಿ ಅಲೆ ಬೀಸುತ್ತಿದ್ದು, ತಾಪಮಾನ ಸಾಮಾನ್ಯಕ್ಕಿಂತ ಏರಿಕೆಯಾಗುತ್ತಿದೆ. ಇದು ಸ್ಥಳೀಯರ ಮತ್ತು ಅಧಿಕಾರಿಗಳಿಗೆ ಕಳವಳವನ್ನುಂಟು ಮಾಡಿದೆ.
ಶ್ರೀನಗರದ ಹವಾಮಾನ ಇಲಾಖೆ, ಕಣಿವೆಯ ಹಲವು ಪ್ರದೇಶಗಳಲ್ಲಿ ಬಿಸಿಗಾಳಿಯ ಎಚ್ಚರಿಕೆ ನೀಡಿದ್ದು, ಮುಂದಿನ ಕೆಲವು ದಿನಗಳವರೆಗೂ ತಾಪಮಾನದಲ್ಲಿ ಏರಿಕೆಯಾಗಲಿದೆ ಎಂದು ಹೇಳಿದೆ.
ತಾಪಮಾನ ಏರಿಕೆಯಿಂದಾಗಿ ಕಣಿವೆ ರಾಜ್ಯದ ಜನರ ನಿತ್ಯ ಜೀವನ ಅಸ್ತವ್ಯಸ್ತಗೊಂಡಿದೆ. ಶಾಲೆಗಳಲ್ಲಿ ಸಮಯ ಬದಲಾವಣೆ ಮಾಡಲಾಗಿದೆ. ನಿರ್ಜಲೀಕರಣದಿಂದ ರಕ್ಷಿಸಿಕೊಳ್ಳಿ, ಮಧ್ಯಾಹ್ನದ ಬಳಿಕ ಬಿಸಿಲಿನಿಂದ ದೂರವಿರಿ ಎಂದು ಹವಾಮಾನ ಇಲಾಖೆ ಸೂಚಿಸಿದೆ.
ಶ್ರೀನಗರ ಹವಾಮಾನ ಇಲಾಖೆಯ ಅಧಿಕಾರಿ ಫಾರೂಕ್ ಅಹಮದ್ ಭಟ್ ಸುದ್ದಿ ಸಂಸ್ಥೆ ಎಎನ್‌ಐ ಜತೆ ಮಾತನಾಡಿ, 'ಕಾಶ್ಮೀರದಲ್ಲಿ ಕೆಲವು ದಿನ ಬಿಸಿಗಾಳಿ ಸ್ಥಿತಿ ಮುಂದುವರಿಯಲಿದೆ. ತಾಪಮಾನ ಸಾಮಾನ್ಯಕ್ಕಿಂತ ಒಂದೆರಡು ಡಿಗ್ರಿ ಹೆಚ್ಚಾಗಲಿದೆ. ಶೀಘ್ರದಲ್ಲೇ ಈ ವಾತಾವರಣ ಬದಲಾಗಲಿದೆ. ಮೇ 28ರ ಬಳಿಕ ತುಂತುರು ಮಳೆಯಾಗುವ ಸಾಧ್ಯತೆಯಿದ್ದು, ಬಿಸಿಗಾಳಿ ಸ್ಥಿತಿ ಒಂದು ವಾರದಲ್ಲಿ ಸರಿಯಾಗಲಿದೆ' ಎಂದು ಮಾಹಿತಿ ನೀಡಿದ್ದಾರೆ.
'ಮೇನಲ್ಲಿ ತಾಪಮಾನ 36 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿತ್ತು. ಇದು ಅಸಾಮಾನ್ಯ ಸ್ಥಿತಿಯಾಗಿದೆ. ಪೂರ್ವ ಮುಂಗಾರು ಹಗಲು ಮತ್ತು ರಾತ್ರಿ ತಾಪಮಾನದ ನಡುವೆ ದೊಡ್ಡ ವ್ಯತ್ಯಾಸವನ್ನು ಉಂಟುಮಾಡುತ್ತದೆ. ಶುಷ್ಕ ಹವಾಮಾನ ಮುಂದುವರಿದಾಗ, ಹಗಲಿನ ತಾಪಮಾನವು ತೀವ್ರವಾಗಿ ಏರುತ್ತದೆ, ತಾಪಮಾನ 30-33 ಡಿಗ್ರಿ ಸೆಲ್ಸಿಯಸ್ ದಾಟುತ್ತದೆ, ಇದು ಬಿಸಿಗಾಳಿಗೆ ಕಾರಣವಾಗುತ್ತದೆ ಎಂದೂ ಅವರು ವಿವರಿಸಿದರು.




