ನವದೆಹಲಿ: ನ್ಯಾಯಾಲಯದ ಆದೇಶಗಳನ್ನು ಧಿಕ್ಕರಿಸುವುದು ಕಾನೂನಿನ ಆಳ್ವಿಕೆಯ ತಳಹದಿಯ ಮೇಲೆ ದಾಳಿ ನಡೆಸಿದಂತೆ ಎಂದು ಹೇಳಿರುವ ಸುಪ್ರೀಂ ಕೋರ್ಟ್, ಹೈಕೋರ್ಟ್ ನಿರ್ದೇಶನವನ್ನು ಉಲ್ಲಂಘಿಸಿದ ಆಂಧ್ರ ಪ್ರದೇಶದ ಅಧಿಕಾರಿಯೊಬ್ಬರಿಗೆ ಹಿಂಬಡ್ತಿ ನೀಡುವಂತೆ ಶುಕ್ರವಾರ ಆದೇಶಿಸಿದೆ.
2014ರಲ್ಲಿ ತಹಶೀಲ್ದಾರ್ ಆಗಿದ್ದಾಗ ಗುಂಟೂರು ಜಿಲ್ಲೆಯಲ್ಲಿ ಹಲವು ಗುಡಿಸಲುಗಳನ್ನು ಬಲವಂತವಾಗಿ ತೆರವುಗೊಳಿಸಿದ್ದ ಜಿಲ್ಲಾಧಿಕಾರಿಯೊಬ್ಬರನ್ನು ತಹಶೀಲ್ದಾರ್ ಹುದ್ದೆಗೆ ಹಿಂಬಡ್ತಿ ಮಾಡುವಂತೆ ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ಆಗಸ್ಟಿನ್ ಜಾರ್ಜ್ ಮಸೀಹ್ ಅವರಿದ್ದ ಪೀಠವು ಆಂಧ್ರ ಪ್ರದೇಶ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಪ್ರಕರಣ ನಡೆಯುವ ಅವಧಿಯಲ್ಲಿ ತಹಶೀಲ್ದಾರ್ ಹುದ್ದೆಯಲ್ಲಿದ್ದ ಅವರು 2023ರಲ್ಲಿ ಜಿಲ್ಲಾಧಿಕಾರಿ ಹುದ್ದೆಗೆ ಬಡ್ತಿ ಹೊಂದಿದ್ದರು.
'ನ್ಯಾಯಾಲಯದ ಆದೇಶ ಧಿಕ್ಕರಿಸುವುದನ್ನು ಯಾರೂ ಸಹಿಸುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಇಡೀ ದೇಶಕ್ಕೆ ರವಾನಿಸಲು ನಾವು ಬಯಸುತ್ತೇವೆ' ಎಂದು ನ್ಯಾಯಮೂರ್ತಿ ಗವಾಯಿ ಹೇಳಿದರು.
ಅಧಿಕಾರಿಗೆ ₹1 ಲಕ್ಷ ದಂಡ ವಿಧಿಸಿದ ಸುಪ್ರೀಂ ಕೋರ್ಟ್, 'ಕಾನೂನಿಗಿಂತ ಯಾರೂ ಮೇಲಲ್ಲ' ಎಂಬ ಸಂದೇಶವನ್ನು ಎಲ್ಲರಿಗೂ ತಲುಪಿಸುವ ಅಗತ್ಯವನ್ನು ಒತ್ತಿ ಹೇಳಿತು.
'ಪ್ರತಿಯೊಬ್ಬ ಅಧಿಕಾರಿ, ಆತ ಎಷ್ಟೇ ಉನ್ನತ ಸ್ಥಾನದಲ್ಲಿದ್ದರೂ ನ್ಯಾಯಾಲಯ ನೀಡುವ ನಿರ್ದೇಶನವನ್ನು ಗೌರವಿಸಬೇಕು ಮತ್ತು ಪಾಲಿಸಬೇಕು' ಎಂದು ಪೀಠ ಹೇಳಿದೆ.
'ನ್ಯಾಯಾಲಯದ ಆದೇಶಗಳನ್ನು ಪಾಲಿಸದಿರುವುದು ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯ ಮೂಲ ಆಧಾರವಾಗಿರುವ ಕಾನೂನಿನ ಆಳ್ವಿಕೆಯ ತಳಹದಿಯ ಮೇಲೆ ದಾಳಿ ನಡೆಸುವುದಕ್ಕೆ ಸಮನಾಗುತ್ತದೆ' ಎಂದಿತು. ಹೈಕೋರ್ಟ್‌ನ ವಿಭಾಗೀಯ ಪೀಠದ ಆದೇಶದ ವಿರುದ್ಧ ಅಧಿಕಾರಿ ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸಿತು.
ಗುಡಿಸಲುಗಳನ್ನು ತೆರವುಗೊಳಿಸಬಾರದು ಎಂದು ಹೈಕೋರ್ಟ್ 2013ರ ಡಿಸೆಂಬರ್ 11ರಂದು ಆದೇಶಿಸಿತ್ತು. ಆದರೆ ಅಂದು ತಹಶೀಲ್ದಾರ್ ಆಗಿದ್ದ ಆ ಅಧಿಕಾರಿ, 2014ರ ಜನವರಿಯಲ್ಲಿ ಬಲವಂತವಾಗಿ ಹಲವು ಗುಡಿಸಲುಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಸಿದ್ದರು.
ನ್ಯಾಯಾಲಯದ ಆದೇಶ ಉಲ್ಲಂಘಿಸಿದ್ದಕ್ಕೆ ಹೈಕೋರ್ಟ್‌ನ ಏಕಸದಸ್ಯ ಪೀಠವು ಅಧಿಕಾರಿಗೆ ಎರಡು ವರ್ಷ ಜೈಲು ವಿಧಿಸಿತ್ತು. ಆ ಅಧಿಕಾರಿ, ಏಕಸದಸ್ಯ ಪೀಠದ ಆದೇಶವನ್ನು ಪ್ರಶ್ನಿಸಿ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಏಕಸದಸ್ಯ ಪೀಠದ ಆದೇಶದಲ್ಲಿ ಹಸ್ತಕ್ಷೇಪ ಮಾಡಲು ವಿಭಾಗೀಯ ಪೀಠ ನಿರಾಕರಿಸಿದ್ದರಿಂದ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.




