ಭೋಪಾಲ್: ಕರ್ನಲ್ ಸೋಫಿಯಾ ಖುರೇಷಿ ಅವರ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಉಚ್ಚಾರಣಾ ದೋಷದಿಂದ ತಪ್ಪಾಗಿದೆ ಎಂದಿರುವ ಮಧ್ಯಪ್ರದೇಶದ ಸಚಿವ ವಿಜಯ್ ಶಾ ಅವರು ಮತ್ತೊಮ್ಮೆ ಕ್ಷಮೆಯಾಚಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಯಾವುದೇ ಧರ್ಮ, ಜಾತಿ ಅಥವಾ ಸಮುದಾಯವನ್ನು ನೋಯಿಸುವುದು ನನ್ನ ಉದ್ದೇಶವಾಗಿರಲಿಲ್ಲ.
ನಾನು ಅಜಾಗರೂಕತೆಯಿಂದ ಹೇಳಿದ ಮಾತುಗಳಿಗಾಗಿ ಇಡೀ ಭಾರತೀಯ ಸೇನೆ, ಸಹೋದರಿ ಕರ್ನಲ್ ಸೋಫಿಯಾ ಸೇರಿದಂತೆ ಎಲ್ಲಾ ದೇಶವಾಸಿಗಳ ಬಳಿ ನಾನು ಮತ್ತೊಮ್ಮೆ ಕೈಜೋಡಿಸಿ ಕ್ಷಮೆಯಾಚಿಸುತ್ತೇನೆ' ಎಂದು ಹೇಳಿದ್ದಾರೆ.
'ಕೆಲವು ದಿನಗಳ ಹಿಂದೆ ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭೀಕರ ಹತ್ಯಾಕಾಂಡದಿಂದ ನಾನು ತೀವ್ರವಾಗಿ ದುಃಖಿತನಾಗಿದ್ದೇನೆ. ನನಗೆ ಯಾವಾಗಲೂ ನನ್ನ ರಾಷ್ಟ್ರದ ಬಗ್ಗೆ ಅಪಾರ ಪ್ರೀತಿ ಮತ್ತು ಭಾರತೀಯ ಸೇನೆಯ ಬಗ್ಗೆ ಗೌರವವಿದೆ' ಎಂದು ಶಾ ತಿಳಿಸಿದ್ದಾರೆ.
ಕರ್ನಲ್ ಸೋಫಿಯಾ ಖುರೇಷಿ ಅವರ ವಿರುದ್ಧ ವಿಜಯ್ ಶಾ ಆಡಿದ್ದ ಆಕ್ಷೇಪಾರ್ಹ ಹೇಳಿಕೆ ಕುರಿತ ತನಿಖೆಗೆ ರಾಜ್ಯ ಪೊಲೀಸ್ ಇಲಾಖೆ ವಿಶೇಷ ತನಿಖಾ ತಂಡ ರಚಿಸಿದೆ.
ಸುಪ್ರೀಂ ಕೋರ್ಟ್ ಆದೇಶದ ಅನುಸಾರ ಈ ತಂಡ ರಚಿಸಲಾಗಿದೆ. ಐಜಿಪಿ ಪ್ರಮೋದ್ ವರ್ಮಾ, ಡಿಐಜಿ ಕಲ್ಯಾಣ್ ಚಕ್ರವರ್ತಿ ಮತ್ತು ಎಸ್‌ಪಿ ವಾಹಿನಿ ಸಿಂಗ್ ಅವರು ಈ ತಂಡದಲ್ಲಿದ್ದಾರೆ ಎಂದು ಹೇಳಿಕೆ ತಿಳಿಸಿದೆ.
ವಿಜಯ್ ಶಾ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ಸುಪ್ರೀಂ ಕೋರ್ಟ್, ಸಚಿವರ ವಿರುದ್ಧ ಎಫ್‌ಐಆರ್ ದಾಖಲಿಸಿ, ಎಸ್‌ಐಟಿ ರಚಿಸಬೇಕು ಎಂದೂ ನಿರ್ದೇಶಿಸಿತ್ತು. ಹೀಗಾಗಿ, ರಾಜ್ಯ ಪೊಲೀಸ್ ಮಹಾನಿರ್ದೇಶಕರು ಎಸ್‌ಐಟಿ ರಚನೆ ಬಗ್ಗೆ ಆದೇಶ ಹೊರಡಿಸಿದ್ದಾರೆ. ತನಿಖಾ ತಂಡವು ಮೇ 28ರ ಒಳಗೆ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ.




