ಮುಂಬೈ: 'ಭಾರತವನ್ನು ಆಡುಂಬೊಲ ಮಾಡಿಕೊಂಡು ಈ ನೆಲದ ಕಥೆಗಳನ್ನು ಕಣ್ಣಿಗೆ ಕಟ್ಟುವಂತೆ ತೋರಿಸಲು ಬನ್ನಿ' ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಜಾಗತಿಕ ಮನರಂಜನಾ ಹೂಡಿಕೆದಾರರಿಗೆ ಆಹ್ವಾನವಿತ್ತರು.
ಇಲ್ಲಿನ ಜಿಯೊ ವರ್ಲ್ಡ್ ಸೆಂಟರ್‌ನಲ್ಲಿ ಜಾಗತಿಕ ಶ್ರವಣ - ದೃಶ್ಯ ಮನರಂಜನೆ ಶೃಂಗ -2025 (ವೇವ್ಸ್) ಅನ್ನು ಗುರುವಾರ ಉದ್ಘಾಟಿಸಿ, ಅವರು ಮಾತನಾಡಿದರು.
ಮನರಂಜನಾ ಕ್ಷೇತ್ರ ಯುವಕರನ್ನು ಸೆಳೆದಿರುವ ಈ ದಿನಮಾನವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಅವರಾಡಿದ ನುಡಿಸಾರ ಹೇಗಿದೆ:
* ತಂತ್ರಜ್ಞಾನ ಈಗ ಬದುಕಿನಲ್ಲಿ ಹಾಸುಹೊಕ್ಕಾಗಿದೆ. ಹಾಗೆಂದು ಮನುಷ್ಯರನ್ನು ರೋಬೊಗಳನ್ನಾಗಿ ಮಾಡಕೂಡದು. ಮನುಷ್ಯರಲ್ಲಿ ಇನ್ನಷ್ಟು ಮಾನವೀಯ ಅಂಶ ಬಿತ್ತಬೇಕು
* ಭಾರತದ 'ಖಾನಾ' (ಊಟ) ವಿಶ್ವದಲ್ಲೇ ಜನಪ್ರಿಯ. ನಮ್ಮ ದೇಶದ 'ಗಾನಾ' (ಹಾಡು) ಕೂಡ ಹೀಗೆಯೇ ಜನಪ್ರಿಯ ಆಗಲಿ
* ಲಕ್ಷಾಂತರ ಕಥೆಗಳು ನಮ್ಮಲ್ಲಿವೆ. ಹಳ್ಳಿ ಹಳ್ಳಿಗೂ ಒಂದು ಜನಪದ ಇದೆ. ಪರ್ವತದ ಹಾಡು, ನದಿಯ ಗುನುಗು... ಎಲ್ಲವೂ ನಮ್ಮದು. ಅವನ್ನೇ ಚೆಂದದ 'ಕಂಟೆಂಟ್' ಆಗಿಸಿ
* ನೂರಕ್ಕೂ ಹೆಚ್ಚು ದೇಶಗಳಲ್ಲಿ ಭಾರತದ ಚಿತ್ರಗಳು ತೆರೆಕಾಣುತ್ತಿವೆ. ಒಟಿಟಿ ವೇದಿಕೆಯ ಬೆಳವಣಿಗೆ ಅಲ್ಪಾವಧಿಯಲ್ಲೇ ಹತ್ತು ಪಟ್ಟಾಗಿದೆ
* ಪರದೆ ಚಿಕ್ಕದಾಗುತ್ತಿದೆ, ಸಾಧ್ಯತೆ ಅಷ್ಟೇ ದೊಡ್ಡದಾಗುತ್ತಿದೆ
* ಆಯನಿಮೇಷನ್ ಹಾಗೂ ಗ್ರಾಫಿಕ್ ಉದ್ಯಮದ ವಹಿವಾಟು ಭಾರತದಲ್ಲಿ ₹400 ಕೋಟಿಗೂ ಹೆಚ್ಚಿದೆ. ಇನ್ನು ಹತ್ತು ವರ್ಷಗಳಲ್ಲಿ ಇದು ದುಪ್ಪಟ್ಟಾಗುವ ಸಾಧ್ಯತೆ ಇದೆ
* 'ವೇವ್ಸ್' ಎನ್ನುವುದು ಈ ಶೃಂಗದ ಸಂಕ್ಷಿಪ್ತ ಪದವಷ್ಟೇ ಅಲ್ಲ, ಅದು ನಿಜಕ್ಕೂ 'ವೇವ್ಸ್' (ಅಲೆ) ಎಬ್ಬಿಸಲಿದೆ
* ಮುಂದೆ 'ವೇವ್ಸ್' ಪ್ರಶಸ್ತಿಗಳನ್ನು ಪ್ರಾರಂಭಿಸಲಾಗುತ್ತದೆ. ಅವು ದೇಶದ ಪ್ರತಿಷ್ಠಿತ ಪ್ರಶಸ್ತಿಗಳಾಗಿ ಪರಿಗಣಿತವಾಗಲಿವೆ
Quote - ಮುಂಬೈನ ಫಿಲ್ಮ್ ಸಿಟಿಯನ್ನು 120 ಎಕರೆಯಷ್ಟು ವಿಸ್ತರಿಸಿ ನವೀಕರಿಸಲಾಗುತ್ತಿದೆ. ಹೊಸ ಸವಲತ್ತುಗಳೊಂದಿಗೆ ಅದು ಚಿತ್ರರಂಗದವರಿಗೆ ಲಭ್ಯವಾಗಲಿದೆ ದೇವೇಂದ್ರ ಫಡಣವಿಸ್ ಮಹಾರಾಷ್ಟ್ರ ಮುಖ್ಯಮಂತ್ರಿ
Cut-off box - ಜನರ ಪ್ರಶಸ್ತಿಯಾಗಿ ಬದಲಾದ 'ಪದ್ಮ' 'ಪದ್ಮ ಪ್ರಶಸ್ತಿಗಳನ್ನು ಬಹಳ ವರ್ಷಗಳಿಂದ ನೀಡುತ್ತಾ ಬಂದಿದ್ದಾರೆ. ನಾವು ಅದನ್ನು ಜನರ ಪ್ರಶಸ್ತಿಯಾಗಿ ಬದಲಾಯಿಸಿದೆವು. ತಮ್ಮಷ್ಟಕ್ಕೆ ತಾವು ಸಾಧನೆ ಮಾಡುತ್ತಾ ಬದುಕುವ ಎಲೆ ಮರೆಯ ಕಾಯಿಯಂತಹ ಜನರನ್ನು ಈ ಪ್ರಶಸ್ತಿಗೆ ಆರಿಸಿದೆವು. ಅದೀಗ ಜನರ ಪದ್ಮ ಪ್ರಶಸ್ತಿ ಆಗಿ ಬದಲಾಗಿದೆ' ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
'ಮುಂದಿನ ದಶಕದಲ್ಲಿ ಮನರಂಜನಾ ಕ್ಷೇತ್ರ ನಾಲ್ಕು ಪಟ್ಟು ಅಭಿವೃದ್ಧಿ'
ಮುಂದಿನ ದಶಕದ ಹೊತ್ತಿಗೆ ಭಾರತೀಯ ಮಾಧ್ಯಮ ಮತ್ತು ಮನರಂಜನಾ ಉದ್ಯಮವು ನಾಲ್ಕು ಪಟ್ಟು ಬೆಳವಣಿಗೆ ದರವನ್ನು ಸಾಧಿಸಬಹುದು ಎಂದು ರಿಲಯನ್ಸ್ ಅಧ್ಯಕ್ಷ ಮುಕೇಶ್ ಅಂಬಾನಿ ಅಭಿಪ್ರಾಯಪಟ್ಟರು. ಸದ್ಯಕ್ಕೆ ಈ ಮಾರುಕಟ್ಟೆಯ ಮೌಲ್ಯ ಸುಮಾರು 28 ಶತಕೋಟಿ ಅಮೆರಿಕನ್ ಡಾಲರ್ (₹23.5 ಲಕ್ಷ ಕೋಟಿಗಿಂತ ಹೆಚ್ಚು) ಇದೆ ಎಂದು ತಿಳಿಸಿದರು. 'ಪಹಲ್ಗಾಮ್‌ನಲ್ಲಿ ನಡೆದ ಭೀಕರ ದಾಳಿಗೆ ಬಲಿಯಾದವರ ಕುಟುಂಬಗಳಿಗೆ ನಮ್ಮ ಹೃತ್ಪೂರ್ವಕ ಸಂತಾಪ ಸೂಚಿಸುತ್ತೇನೆ. ಕಠಿಣ ಸಂದರ್ಭದಲ್ಲಿಯೂ ಪ್ರಧಾನಿ ಇಲ್ಲಿಗೆ ಭೇಟಿ ನೀಡಿರುವುದು ಬಲವಾದ ಸಂದೇಶವನ್ನು ರವಾನಿಸುತ್ತದೆ' ಎಂದು ಅವರು ಹೇಳಿದರು.




