ನವದೆಹಲಿ: ಮಣಿಪುರದ ಚುರಾಚಂದಪುರದಲ್ಲಿರುವ ಸೆಷನ್ಸ್ ನ್ಯಾಯಾಲಯವನ್ನು ಜನಾಂಗೀಯ ಹಿಂಸಾಚಾರಕ್ಕೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆಗಾಗಿ ವಿಶೇಷ ಎನ್‌ಐಎ ನ್ಯಾಯಾಲಯವಾಗಿ ಪರಿವರ್ತಿಸಲಾಗಿದೆ.
ಚುರಾಚಂದಪುರದ ಜಿಲ್ಲಾ ಮತ್ತು ಸೆಷನ್ಸ್ ಜಿಲ್ಲಾ ನ್ಯಾಯಾಲಯವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಕಾಯ್ದೆ, 2008ರ ಸೆಕ್ಷನ್ 11 ಅಡಿಯಲ್ಲಿ ವಿಶೇಷ ನ್ಯಾಯಾಲಯವಾಗಿ ಪರಿವರ್ತಿಸಲಾಗಿದೆ ಎಂದು ತಿಳಿಸಿದೆ ಎಂದು ಗುರುವಾರ ಗೃಹ ವ್ಯವಹಾರಗಳ ಸಚಿವಾಲಯ (ಎಂಎಚ್‌ಎ) ಅಧಿಸೂಚನೆಯಲ್ಲಿ ತಿಳಿಸಿದೆ.
'ರಾಷ್ಟ್ರೀಯ ತನಿಖಾ ಸಂಸ್ಥೆ ಕಾಯ್ದೆ, 2008ರ ಸೆಕ್ಷನ್ 11ರ(2008 ರ 34) ಅಡಿಯಲ್ಲಿ ನೀಡಲಾದ ಅಧಿಕಾರವನ್ನು ಚಲಾಯಿಸಿ, ಕೇಂದ್ರ ಸರ್ಕಾರವು ಮಣಿಪುರದ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳೊಂದಿಗೆ ಸಮಾಲೋಚಿಸಿ, ರಾಷ್ಟ್ರೀಯ ತನಿಖಾ ಸಂಸ್ಥೆ ತನಿಖೆ ಮಾಡಿದ ನಿಗದಿತ ಪ್ರಕರಣಗಳ ವಿಚಾರಣೆಗಾಗಿ, ಚುರಾಚಂದಪುರ ಜಿಲ್ಲೆಯ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವನ್ನು ಈ ಮೂಲಕ ವಿಶೇಷ ನ್ಯಾಯಾಲಯವಾಗಿ ಗೊತ್ತುಪಡಿಸಲಾಗಿದೆ'ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ವಿಶೇಷ ನ್ಯಾಯಾಲಯದ ಅಧಿಕಾರ ವ್ಯಾಪ್ತಿ ಮಣಿಪುರದಾದ್ಯಂತ ಇರಲಿದೆ.
2023ರ ಮೇ 3ರಿಂದ ಆರಂಭವಾದ ಜನಾಂಗೀಯ ಹಿಂಸಾಚಾರಕ್ಕೆ ಸಂಬಂಧಿಸಿದ ಮೂರು ಪ್ರಮುಖ ಪ್ರಕರಣಗಳ ವಿಚಾರಣೆಯನ್ನು ಎನ್‌ಐಎ ವಹಿಸಿಕೊಂಡಿದೆ. ಈ ಪ್ರಕರಣಗಳಲ್ಲಿ ಜಿರಿಬಾಮ್‌ನಲ್ಲಿ ಆರು ಮಹಿಳೆಯರು ಮತ್ತು ಮಕ್ಕಳ ಅಪಹರಣ, ಹತ್ಯೆ ಹಾಗೂ ಇತರ ಹಿಂಸಾತ್ಮಕ ಘಟನೆಗಳು ಸೇರಿವೆ.
ಅಪರಾಧಗಳ ತೀವ್ರತೆ ಮತ್ತು ಮಣಿಪುರದಲ್ಲಿ ಹೆಚ್ಚುತ್ತಿರುವ ಹಿಂಸಾಚಾರದಿಂದಾಗಿ ಕೇಂದ್ರ ಗೃಹ ಸಚಿವಾಲಯ ತನಿಖೆಯನ್ನು ಎನ್‌ಐಎಗೆ ಹಸ್ತಾಂತರಿಸಿತ್ತು.
2023ರ ಮೇ 3ರಿಂದ ಕುಕಿ ಮತ್ತು ಮೈತೇಯಿ ಸಮುದಾಯಗಳ ನಡುವೆ ಆರಂಭವಾಗಿದ್ದ ಜನಾಂಗೀಯ ಹಿಂಸಾಚಾರ ಹಲವು ತಿಂಗಳುಗಳ ಕಾಲ ನಡೆದಿತ್ತು. ಕನಿಷ್ಠ 260 ಮಂದಿ ಮೃತಪಟ್ಟರೆ, ಸಾವಿರಾರು ಮಂದಿ ಮನೆಗಳನ್ನು ಕಳೆದುಕೊಂಡಿದ್ದರು.




