ನ್ಯೂಯಾರ್ಕ್: 'ಭಾರತದ ಗಡಿ ದಾಟಿ, ಭಾರತೀಯರನ್ನೇ ನಿರ್ಭೀತವಾಗಿ ಹತ್ಯೆ ಮಾಡುತ್ತೇನೆ ಎಂದು ಪಾಕಿಸ್ತಾನದಲ್ಲಿ ಕುಳಿತ ಯಾವೊಬ್ಬ ವ್ಯಕ್ತಿಯೂ ಇನ್ನು ಮುಂದೆ ಆಲೋಚನೆ ಮಾಡಲಾಗದು. ಪ್ರತಿ ಕೃತ್ಯಕ್ಕೂ ತಕ್ಕನಾದ ಬೆಲೆ ತೆರಬೇಕಾಗುತ್ತದೆ. ಆ ಪರಿಣಾಮ ತೀವ್ರವಾಗಿರಲಿದೆ' ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿದ್ದಾರೆ.
ಸರ್ವಪಕ್ಷ ನಿಯೋಗದ ನೇತೃತ್ವ ವಹಿಸಿರುವ ತರೂರ್, ನ್ಯೂಯಾರ್ಕ್‌ನಲ್ಲಿ ಭಾರತೀಯ ರಾಯಭಾರ ಕಚೇರಿ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿದ್ದಾರೆ. ಈ ವೇಳೆ ಆಪರೇಷನ್ ಸಿಂಧೂರದ ಉದ್ದೇಶ, ಭಯೋತ್ಪಾದನೆ ವಿರುದ್ಧ ಭಾರತದ ನಿಲುವುಗಳನ್ನು ಸ್ಪಷ್ಟಪಡಿಸಿ, ಮೇಲ್ಕಂಡ ಹೇಳಿಕೆ ನೀಡಿದ್ದಾರೆ.
'ನಾವು ಭಯೋತ್ಪಾದಕರಿಗೆ ಕೆಲವು ಸಂದೇಶಗಳನ್ನಷ್ಟೆ ನೀಡಿದ್ದೇವೆ. ನೀವು ಶುರು ಮಾಡಿದಿರಿ, ನಾವು ಪ್ರತ್ಯುತ್ತರ ನೀಡಿದೆವು. ನೀವು ನಿಲ್ಲಿಸಿದರೆ, ನಾವು ಕೂಡ ನಿಲ್ಲಿಸುತ್ತೇವೆ' ಎಂದೂ ತರೂರ್ ಹೇಳಿದ್ದಾರೆ.
ಏತನ್ಮಧ್ಯೆ, ಬಿಜೆಪಿ ಸಂಸದ ಬೈಜಯಂತ್ ಜಯ್ ಪಾಂಡ ನೇತೃತ್ವದ ಸರ್ವಪಕ್ಷಗಳ ನಿಯೋಗವು ಬಹರೇನ್‌ಗೆ ಭೇಟಿ ನೀಡಿದ್ದು, ಅಲ್ಲಿನ ಉಪ ಪ್ರಧಾನಿ ಶೇಖ್ ಖಲೀದ್ ಬಿನ್ ಅಬ್ದುಲ್ಲಾ ಅಲ್ ಖಲೀಫಾ ಅವರೊಂದಿಗೆ ಮಾತುಕತೆ ನಡೆಸಿದೆ. ಭಯೋತ್ಪಾದನೆ ವಿರುದ್ಧದ ಭಾರತದ ನಿಲುವನ್ನು ಸ್ಪಷ್ಟಪಡಿಸಿರುವ ನಿಯೋಗವು, ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ಬೆಹರೇನ್‌ನ ಬೆಂಬಲಗಳಿಸುವಲ್ಲೂ ಸಫಲವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.




