ನವದೆಹಲಿ: ಹಿಂಸಾಚಾರ ಪೀಡಿತ ಮಣಿಪುರಕ್ಕೆ ಕಳೆದ ಎರಡು ವರ್ಷಗಳಲ್ಲಿ ಒಮ್ಮೆಯೂ ಭೇಟಿ ನೀಡದೆ ಮತ್ತೊಮ್ಮೆ ರಾಜಧರ್ಮವನ್ನು ಮರೆತಿದ್ದೀರಿ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ಸಂಘರ್ಷ ಪೀಡಿತ ನೆಲಕ್ಕೆ ಒಮ್ಮೆಯೂ ಭೇಟಿ ನೀಡದೆ ಇರುವುದು ಮಣಿಪುರ ಜನರ ಮೇಲಿನ ನಿರಾಸಕ್ತಿ ಧೋರಣೆಗೆ ಸಾಕ್ಷಿಯಾಗಿದೆ.
ರಾಜಕೀಯ ಹೊಣೆಗಾರಿಕೆ ಎಲ್ಲಿದೆ? ಎಂದು ಪ್ರಶ್ನಿಸಿದ್ದಾರೆ.
ಮಣಿಪುರದಲ್ಲಿ 2022ರಲ್ಲಿ ನಡೆದ ಚುನಾವಣಾ ರ‍್ಯಾಲಿಯಲ್ಲಿ ನೀವು (ಮೋದಿ) ಕಾಣಿಸಿಕೊಂಡಿದ್ದೇ ಕೊನೆ. ವಿದೇಶಗಳಿಗೆ ಭೇಟಿ ನೀಡಲು ಸಮಯಾವಕಾಶವಿರುವ ನಿಮಗೆ ಮಣಿಪುರಕ್ಕೆ ಭೇಟಿ ನೀಡಲು ಸಮಯವಿಲ್ಲವೇ?, ರಾಜ್ಯದಲ್ಲಿ ಇಷ್ಟು ಹಿಂಸಾಚಾರ, ರಾಜಕೀಯ ಬೆಳವಣಿಗೆ, ಕೋಮು ಸಂಘರ್ಷ ನಡೆದಿದ್ದರೂ ಎರಡು ವರ್ಷಗಳಲ್ಲಿ ಒಮ್ಮೆಯೂ ಭೇಟಿ ನೀಡಲಿಲ್ಲ ಏಕೆ? ಮಣಿಪುರದ ಬಗ್ಗೆ ಇಷ್ಟೊಂದು ತಿರಸ್ಕಾರ ಏಕೆ ಎಂದು ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಡಬಲ್ ಎಂಜಿನ್ ಸರ್ಕಾರ ಇದ್ದರೂ ಜನರಿಗೆ ಭದ್ರತೆ ಮತ್ತು ಸುರಕ್ಷತೆಯನ್ನು ಒದಗಿಸುವ ಸಾಂವಿಧಾನಿಕ ಕರ್ತವ್ಯ ನಿರ್ವಹಿಸಲುವಲ್ಲಿ ಏಕೆ ವಿಫಲವಾಗಿದೆ? 260ಕ್ಕೂ ಹೆಚ್ಚು ಜನರು ಮೃತಪಟ್ಟರು. ಸಾವಿರಾರು ಮಂದಿ ನಿರಾಶ್ರಿತರಾದರು. ಈಗಲೂ ಆತಂಕದ ನಡುವೆಯೇ ನಿರಾಶ್ರಿತ ಕೇಂದ್ರಗಳಲ್ಲಿ ಅವರು ಬದುಕುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ಬಂದಿದ್ದರೂ, ಶಾಂತಿ ಪುನಃ ಸ್ಥಾಪಿಸಲು ವಿಫಲವಾಗಿದೆ. ಹಿಂಸಾಚಾರದ ಘಟನೆಗಳು ಕಳೆದ ಎರಡು ವರ್ಷಗಳಿಂದಲೂ ವರದಿಯಾಗುತ್ತಲೇ ಇದೆ ಎಂದು ಖರ್ಗೆ ತಿಳಿಸಿದ್ದಾರೆ.




