ನವದೆಹಲಿ: ಬೇರೆ ಬೇರೆ ನ್ಯಾಯಪೀಠಗಳು ಪರಸ್ಪರ ಹೊಂದಾಣಿಕೆ ಇಲ್ಲದೆ ತೀರ್ಪುಗಳನ್ನು ಪ್ರಕಟಿಸಿದಾಗ ಸಾರ್ವಜನಿಕರು ನ್ಯಾಯಾಲಯಗಳ ಮೇಲೆ ಇರಿಸಿರುವ ವಿಶ್ವಾಸಕ್ಕೆ ಧಕ್ಕೆ ಆಗುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಬೇರೆ ಬೇರೆ ತೀರ್ಪುಗಳ ನಡುವೆ ಸಾಮಂಜಸ್ಯ ಇದ್ದಾಗ ಅದು ಜವಾಬ್ದಾರಿಯುತ ನ್ಯಾಯಾಂಗದ ಪಾಲಿಗೆ ಹೆಗ್ಗುರುತಾಗಿ ಪರಿಣಮಿಸುತ್ತದೆ ಎಂದು ಅದು ಹೇಳಿದೆ.
ಕರ್ನಾಟಕ ಹೈಕೋರ್ಟ್‌ನ ಎರಡು ಏಕಸದಸ್ಯ ಪೀಠಗಳು ವೈವಾಹಿಕ ಪ್ರಕರಣವೊಂದರಲ್ಲಿ ಭಿನ್ನ ಆದೇಶ ಹೊರಡಿಸಿರುವ ಬಗ್ಗೆ ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಜಾಯಮಾಲ್ಯಾ ಬಾಗಚಿ ಅವರು ಇರುವ ವಿಭಾಗೀಯ ಪೀಠವು ವಿಚಾರಣೆ ನಡೆಸುತ್ತಿದೆ.
'ಒಬ್ಬರು ನ್ಯಾಯಮೂರ್ತಿಯು ಸಂಬಂಧಿಗಳ ವಿರುದ್ಧ ಕಾನೂನು ಕ್ರಮವನ್ನು ರದ್ದುಪಡಿಸಲು ನಿರಾಕರಿಸಿದ್ದಾರೆ. ಅರ್ಜಿದಾರರ ಮೇಲೆ ಹಲ್ಲೆ ಆಗಿತ್ತು ಎಂಬುದನ್ನು ಗಾಯಗಳಿಗೆ ಸಂಬಂಧಿಸಿದ ಪ್ರಮಾಣಪತ್ರವು ಹೇಳುತ್ತಿದೆ ಎಂದಿದ್ದಾರೆ. ಆದರೆ ಇನ್ನೊಬ್ಬರು ನ್ಯಾಯಮೂರ್ತಿಯು ಪ್ರತಿವಾದಿ ಪತಿ ವಿರುದ್ಧದ ಕಾನೂನು ಕ್ರಮವನ್ನು ರದ್ದುಪಡಿಸಿದ್ದಾರೆ, ದೂರುದಾರರ ಆರೋಪಗಳಿಗೆ ವೈದ್ಯಕೀಯ ಪ್ರಮಾಣಪತ್ರವು ಪೂರಕವಾಗಿಲ್ಲ ಎಂದು ಹೇಳಿದ್ದಾರೆ' ಎಂದು ಸುಪ್ರೀಂ ಕೋರ್ಟ್‌ನ ಪೀಠವು ಹೇಳಿದೆ.
ಪತಿಯ ವಿರುದ್ಧದ ಕಾನೂನು ಕ್ರಮವನ್ನು ರದ್ದುಪಡಿಸಿ ಎರಡನೆಯ ನ್ಯಾಯಮೂರ್ತಿ ನೀಡಿರುವ ಆದೇಶದ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿರುವ ನ್ಯಾಯಮೂರ್ತಿ ಬಾಗಚಿ ಅವರು, 'ಎಫ್‌ಐಆರ್‌ನಲ್ಲಿರುವ ಆರೋಪಗಳ ವಿಶ್ವಾಸಾರ್ಹತೆಯ ಬಗ್ಗೆ ವಿಚಾರಣೆ ನಡೆಸಿ ನ್ಯಾಯಮೂರ್ತಿ ತಪ್ಪು ಮಾಡಿದ್ದಾರೆ ಎಂಬುದು ನಮ್ಮ ಅಭಿಪ್ರಾಯ' ಎಂದು ಹೇಳಿದ್ದಾರೆ.
ಕೆಲವು ಸಂಬಂಧಿಕರ ವಿರುದ್ಧದ ಕಾನೂನು ಕ್ರಮವನ್ನು ರದ್ದುಪಡಿಸಲು ನಿರಾಕರಿಸಿ ಮೊದಲು ಒಂದು ಆದೇಶ ಹೊರಡಿಸಲಾಗಿತ್ತಾದರೂ, ಪತಿಯ ವಿರುದ್ಧದ ಕಾನೂನು ಕ್ರಮ ರದ್ದುಪಡಿಸಿದ ಆದೇಶದಲ್ಲಿ ಅದರ ಬಗ್ಗೆ ಉಲ್ಲೇಖ ಇಲ್ಲದಿರುವುದು ಏಕೆ ಎಂಬುದಕ್ಕೆ ವಿವರಣೆ ಸಿಗುತ್ತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
'ಪತಿಯ ವಿರುದ್ಧದ ಕಾನೂನು ಕ್ರಮವನ್ನು ರದ್ದುಪಡಿಸುವ ಸಂದರ್ಭದಲ್ಲಿ ನ್ಯಾಯಮೂರ್ತಿಯು ಮೊದಲಿನ ಆದೇಶವನ್ನು ಪರಾಮರ್ಶಿಸಬೇಕಿತ್ತು, ಭಿನ್ನ ತೀರ್ಮಾನಕ್ಕೆ ಬಂದಿರುವುದಕ್ಕೆ ಕಾರಣ ಗುರುತಿಸಬೇಕಿತ್ತು. ಇದನ್ನು ಮಾಡುವಲ್ಲಿ ವಿಫಲವಾಗಿರುವುದು ನ್ಯಾಯಿಕ ಶಿಸ್ತಿಗೆ ಭಂಗ ತಂದಿದೆ' ಎಂದು ಕೋರ್ಟ್ ವಿವರಿಸಿದೆ.




