ನವದೆಹಲಿ: ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಒಬ್ಬ ವ್ಯಕ್ತಿ ಮಾತ್ರವೇ ಅತ್ಯಾಚಾರ ಎಸಗಿದ್ದರೂ, ಕ್ರೌರ್ಯದಲ್ಲಿ ಭಾಗಿಯಾದ ಎಲ್ಲರೂ ಹೊಣೆಗಾರರಾಗಿರುತ್ತಾರೆ ಮತ್ತು ಸಮಾನ ಶಿಕ್ಷೆಗೆ ಅರ್ಹರಾಗಿರುತ್ತಾರೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
2006ರ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ತಪ್ಪಿತಸ್ಥ ಎಂದು ಆದೇಶಿಸಿದ್ದನ್ನು ಪ್ರಶ್ನಿಸಿ, ರಾಜು ಅಲಿಯಾಸ್ ಉಮಾಕಾಂತ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸಂಜಯ್ ಕರೋಲ್ ಮತ್ತು ಕೆ.ವಿ.ವಿಶ್ವನಾಥನ್ ಅವರನ್ನು ಒಳಗೊಂಡ ನ್ಯಾಯಪೀಠ ವಜಾಗೊಳಿಸಿತು.
ಇದೇ ಸಂದರ್ಭದಲ್ಲಿ, ಐಪಿಸಿ ಸೆಕ್ಷನ್ 376 (2)(ಜಿ) ಎಲ್ಲಾ ತಪ್ಪಿತಸ್ಥರೂ ಸಮಾನ ಉದ್ದೇಶ ಹೊಂದಿದ್ದರು ಎಂದು ಪ್ರತಿಪಾದಿಸುತ್ತದೆ. ಆದರೆ ದೋಷಿಗಳೆಲ್ಲರೂ ಸಮಾನ ಉದ್ದೇಶ ಹೊಂದಿದ್ದರು ಎಂಬುದನ್ನು ಸಾಬೀತು ಮಾಡಬೇಕಾಗುತ್ತದೆ ಎಂದು ಕೋರ್ಟ್ ಒತ್ತಿ ಹೇಳಿತು.




