ಲಂಡನ್: ಫುಟ್‌ಬಾಲ್ ಪ್ರೀಮಿಯರ್ ಲೀಗ್ ಚಾಂಪಿಯನ್‌ಶಿಪ್‌ನಲ್ಲಿ ತಮ್ಮ ತಂಡ ಜಯ ಸಾಧಿಸಿದ ಸಂಭ್ರಮವನ್ನು ಆಚರಿಸುತ್ತಿದ್ದ ಲಿವರ್‌ಪೂಲ್ ತಂಡದ ಅಭಿಮಾನಿಗಳ ಮೇಲೆ ಮಿನಿವ್ಯಾನ್ ಹರಿದು 25ಕ್ಕೂ ಹೆಚ್ಚು ಜನ ಗಂಭೀರವಾಗಿ ಗಾಯಗೊಂಡ ಘಟನೆ ಇಂಗ್ಲೆಂಡ್‌ನ ಲಿವರ್‌ಪೂಲ್ ನಗರದಲ್ಲಿ ನಡೆದಿದೆ.
ಜನರ ಮೇಲೆ ಮಿನಿವ್ಯಾನ್ ಹರಿಸಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಸಂಭ್ರಮಾಚರಣೆಗೆ 10 ಸಾವಿರಕ್ಕೂ ಹೆಚ್ಚು ಜನರು 16 ಕಿ.ಮೀಗೂ ಅಧಿಕ ದೂರ ಮೆರವಣಿಗೆ ನಡೆಸುತ್ತಿದ್ದರು. ಈ ವೇಳೆ ಏಕಾಏಕಿ ಬಂದ ಮಿನಿವ್ಯಾನ್ 27 ಜನರನ್ನು ಗಾಯಗೊಳಿಸಿದೆ. ತಕ್ಷಣ ಆಂಬುಲೆನ್ಸ್ ಮೂಲಕ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈವರೆಗೆ ಯಾವುದೇ ಸಾವು ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.
ಘಟನೆಯು ಯಾವುದೇ ಭಯೋತ್ಪಾದಕ ಹಿನ್ನೆಲೆಯಲ್ಲಿ ನಡೆದಿಲ್ಲ, ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ಪ್ರಾಥಮಿಕ ತನಿಖೆಯ ಬಳಿಕ ತಿಳಿಸಿರುವುದಾಗಿ ವರದಿಯಾಗಿದೆ.
ಕಳೆದ ತಿಂಗಳು ನಡೆದ ಫುಟ್‌ಬಾಲ್ ಪ್ರೀಮಿಯರ್ ಲೀಗ್ ಚಾಂಪಿಯನ್‌ಶಿಪ್‌ನಲ್ಲಿ ಟೊಟೆನ್‌ಹ್ಯಾಮ್ ತಂಡವನ್ನು ಸೋಲಿಸಿ ಲಿವರ್‌ಪೂಲ್ ತಂಡ ಪ್ರಶಸ್ತಿಯನ್ನು ಗೆದ್ದಿತ್ತು.




