ಪೆರ್ಲ: ಜನರಲ್ಲಿ ಧಾರ್ಮಿಕ ಪ್ರಜ್ಞೆ ಜಾಗೃತಿಯಾದಾಗ ದೇವಾಲಯಗಳೂ ಉನ್ನತಿಗೇರಲು ಸಾಧ್ಯವಾಗುವುದಾಗಿ ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ತಿಳಿಸಿದ್ದಾರೆ.
ಅವರು ಎಣ್ಮಕಜೆಯ ಚೌಗ್ರಾಮ ದೇವಾಲಯವೆಂದೇ ಖ್ಯಾತಿ ಪಡೆದಿರುವ ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ಅಂಗವಾಗಿ ಆಯೋಜಿಸಲಾಗಿದ್ದ ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು.
ದೇವಾಲಯಗಳ ಜೀರ್ಣೋದ್ಧಾರದಿಂದ ಸಮಾಜದ ಪುನರುತ್ಥಾನವಾಗುವುದು. ಮಕ್ಕಳಿಗೆ ಎಳವೆಯಿಂದಲೇ ಧಾರ್ಮಿಕ ಬೋಧನೆ ನಡೆಸುವುದು ಅನಿವಾರ್ಯ ಎಂದು ತಿಳಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಎಣ್ಮಕಜೆ ಅಧ್ಯಕ್ಷತೆ ವಹಿಸಿದ್ದರು. ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ಶ್ರೀ ಸುಬ್ರಹ್ಮಣ್ಯ ಪ್ರಕೃತಿಯಲ್ಲಿ ವಿಲೀನವಾಗಿರುವ ದೇವರಾಗಿದ್ದು, ಸತ್‍ಸಂಪತ್ತು ಪ್ರಾಪ್ತಿಗಾಗಿ ಶ್ರೀ ಸುಬ್ರಾಯ ದೇವರ ಆರಾಧನೆ ಅಗತ್ಯ ಎಂದು ತಿಳಿಸಿದರು. ಕ್ಷೇತ್ರ ತಂತ್ರಿಗಳಾದ ಬ್ರಹ್ಮಶ್ರೀ ನೀಲೇಶ್ವರ ಕೀಕಾಂಗೋಡು ಉಚ್ಚಿಲತ್ತಾಯ ಪದ್ಮನಾಭ ತಂತ್ರಿ ಅನುಗ್ರಹ ಭಾಷಣ ಮಾಡಿದರು. ಮಲಬಾರ್ ದೇವಸ್ವಂ ಬೋರ್ಡ್ ಆಯುಕ್ತ ಟಿ.ಸಿ ಬಿಜು, ಸಹಾಯಕ ಆಯುಕ್ತ ಪ್ರದೀಪ್‍ಕೆ.ಪಿ, ಎಣ್ಮಕಜೆ ಗ್ರಾಪಂ ಅಧ್ಯಕ್ಷ ಸೋಮಶೇಖರ ಜೆ.ಎಸ್, ಬ್ರಹ್ಮಕಲಶೋತ್ಸವ ಸಮಿತಿ ಪದಾಧಿಕಾರಿಗಳಾದ ಸದಾಶಿವ ಭಟ್ ಹರಿನಿಲಯ, ಸದಾನಂದ ಶೆಟ್ಟಿ ಕುದ್ವ, ಕೋಲಾಯ ಗುತ್ತು ಗೋಪಾಲ ಮಣಿಯಾಣಿ ಉಪಸ್ಥಿತರಿದ್ದರು. ಈ ಸಂದರ್ಭ ದೇವಸ್ಥಾನದ ಪರಿಚಯ ಒಳಗೊಂಡ ಕೃತಿಯನ್ನು ಮಲಬಾರ್ ದೇವಸ್ವಂ ಬೋರ್ಡ್ ಆಯುಕ್ತ ಟಿ.ಸಿ ಬಿಜು ಬಿಡುಗಡೆಗೊಳಿಸಿದರು. ಶಿವರಾಂ ಅರೆಕ್ಕಾಡಿ ಕಾರ್ಯಕ್ರಮ ನಿರೂಪಿಸಿದರು. ದೇವಸ್ಥಾನದ ಆಡಳಿತ ಮೊಕ್ತೇಸರ ಪಡ್ಟಂಬೈಲುಗುತ್ತಿ ತಾರಾನಾಥ ರೈ ಸ್ವಾಗತಿಸಿದರು.





