ನವದೆಹಲಿ: ಅಮೆಜಾನ್ ವೆಬ್ ಸರ್ವಿಸಸ್‌ಗೆ ಹಣ ಪಾವತಿಸದೆ ಬಾಕಿ ಉಳಿಸಿಕೊಂಡಿರುವ ಕಾರಣಕ್ಕೆ ಬೈಜುಸ್‌ನ ಕಲಿಕಾ ಆಯಪ್ ಅನ್ನು ಗೂಗಲ್ ಪ್ಲೇಸ್ಟೋರ್ ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ಮೂಲಗಳು ತಿಳಿಸಿವೆ.
ಆದರೆ, ಬೈಜುಸ್ ಬ್ರ್ಯಾಂಡ್‌ನಡಿ ಕಾರ್ಯನಿರ್ವಹಿಸುವ 'ಥಿಂಕ್ ಅಂಡ್ ಲರ್ನ್'ನಂತಹ ಇತರ ಕೆಲವು ಆಯಪ್‌ಗಳು ಗೂಗಲ್ ಪ್ಲೆಸ್ಟೋರ್‌ನಲ್ಲಿ ಬಳಕೆಗೆ ಇನ್ನೂ ಲಭ್ಯವಿವೆ.
'ಬೈಜುಸ್‌ನ ಕಲಿಕಾ ಆಯಪ್‌ಗಳನ್ನು ಬೆಂಬಲಿಸಿ ಅದಕ್ಕೆ ಪೂರಕವಾಗಿ ಮಾರುಕಟ್ಟೆ ಒದಗಿಸುತ್ತಿದ್ದ ಅಮೆಜಾನ್ ವೆಬ್ ಸರ್ವಿಸಸ್‌ಗೆ ಹಣ ಪಾವತಿಸದೆ ಬಾಕಿ ಉಳಿಸಿಕೊಂಡಿರುವ ಕಾರಣಕ್ಕೆ ಈ ಆಯಪ್ ಅನ್ನು ಗೂಗಲ್ ಪ್ಲೇಸ್ಟೋರ್‌ನಿಂದ ತೆಗೆದು ಹಾಕಲಾಗಿದೆ' ಎಂದು ಮೂಲಗಳು ಸುದ್ದಿಸಂಸ್ಥೆಗೆ ತಿಳಿಸಿವೆ.
4ರಿಂದ 12ನೇ ತರಗತಿಗಳವರೆಗಿನ ಗಣಿತ, ಭೌತವಿಜ್ಞಾನ, ರಸಾಯನವಿಜ್ಞಾನ ಮತ್ತು ಜೀವವಿಜ್ಞಾನ, 6ರಿಂದ 8ನೇ ತರಗತಿಗಳ ಸಾಮಾಜಿಕ ಅಧ್ಯಯನಗಳ ವಿಷಯಗಳು ಬೈಜುಸ್ ಲೀನಿಂಗ್ ಆಯಪ್‌ನಲ್ಲಿವೆ. ಜೆಇಇ, ನೀಟ್ ಮತ್ತು ಐಎಎಸ್‌ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವವರಿಗೂ ಸಹ ಬೈಜುಸ್‌ನ ಈ ಆಯಪ್ ಕಲಿಕಾ ಸಾಮಗ್ರಿ ಒದಗಿಸುತ್ತಿದೆ. ಈ ಆಯಪ್, ಆಯಪಲ್‌ನ ಆಯಪ್ ಸ್ಟೋರ್‌ನಲ್ಲಿ ಇನ್ನೂ ಲಭ್ಯವಿದೆ. ಬೈಜುಸ್‌ನ ಪ್ರೀಮಿಯಂ ಲೀನಿಂಗ್ ಆಯಪ್ ಮತ್ತು ಎಕ್ಸಾಮ್ ಪ್ರಿಪ್ ಆಯಪ್ ಗೂಗಲ್ ಪ್ಲೇಸ್ಟೋರ್‌ನಲ್ಲಿ ಲಭ್ಯವಿವೆ.
ಸಾಲದಾತ ಅಧಿಕೃತ ಸಂಸ್ಥೆ ಗ್ಲಾಸ್ ಟ್ರಸ್ಟ್ ಮತ್ತು ವಿವಿಧ ಹೂಡಿಕೆದಾರರ ಮೇಲ್ಮನವಿಯ ಮೇರೆಗೆ ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿಯು ಬೈಜುಸ್ ವಿರುದ್ಧ ದಿವಾಳಿತನ ಪ್ರಕ್ರಿಯೆಗಳನ್ನು ಪ್ರಾರಂಭಿಸಿದೆ.




