HEALTH TIPS

ಡಲ್ಲೇವಾಲ್‌ ಸೇರಿದಂತೆ ಹಲವು ರೈತ ನಾಯಕರಿಗೆ ಗೃಹಬಂಧನ

ಚಂಡೀಗಢ: ಶಂಭು ಪೊಲೀಸ್ ಠಾಣೆಯ ಹೊರಗೆ ಪ್ರತಿಭಟನೆ ನಡೆಸಲು ಉದ್ದೇಶಿಸಿದ ಹಿನ್ನೆಲೆ ರೈತ ಮುಂಖಂಡ ಜಗಜೀತ್ ಸಿಂಗ್ ಡಲ್ಲೇವಾಲ್‌ ಸೇರಿದಂತೆ ಸಂಯುಕ್ತ ಕಿಸಾನ್ ಮೋರ್ಚಾದ (ರಾಜಕೀಯೇತರ) ಹಲವು ನಾಯಕರನ್ನು ಪಂಜಾಬ್ ಸರ್ಕಾರ ಸೋಮವಾರ ಗೃಹಬಂಧನದಲ್ಲಿ ಇರಿಸಿದೆ ಎಂದು ರೈತ ಮುಖಂಡರು ಆರೋಪಿಸಿದ್ದಾರೆ.

ಮಾರ್ಚ್‌ನಲ್ಲಿ ಶಂಭು ಮತ್ತು ಖಾನೌರಿ ಗಡಿಯಲ್ಲಿ ಮೊಕ್ಕಾಂ ಹೂಡಿದ್ದ ಪ್ರತಿಭಟನಾ ನಿರತ ರೈತರನ್ನು ಹೊರಹಾಕಲು ದಮನಕಾರಿ ವಿಧಾನಗಳನ್ನು ಬಳಸಲಾಗಿದೆ ಎಂದು ಆರೋಪಿಸಿ ಮೇ 6 ರಂದು ಪಂಜಾಬ್ ಸರ್ಕಾರ ವಿರುದ್ಧ ಪ್ರತಿಭಟನೆಗೆ ಕರೆ ನೀಡಲಾಗಿತ್ತು.

ಪಂಜಾಬ್ ಪೊಲೀಸ್ ಸಿಬ್ಬಂದಿ ತಮ್ಮ ಮನೆಗಳಿಗೆ ಮುಂಜಾನೆ ಬಂದು ಮನೆಯಿಂದ ಆಚೆ ಬಾರದಂತೆ ಸೂಚಿಸಿದ್ದಾರೆ ಎಂದು ರೈತ ಮುಖಂಡರು ಹೇಳಿಕೊಂಡಿದ್ದಾರೆ. ನಾಳೆ ನಡೆಯುವ ಪ್ರತಿಭಟನೆಗೆ ಜನರನ್ನು ಸಜ್ಜುಗೊಳಿಸುವುದನ್ನು ತಡೆಯಲು ಪೊಲೀಸರು ಈ ರೀತಿ ಯೋಜಿಸಿದ್ದಾರೆ ಎಂದು ಅವರು ದೂರಿದ್ದಾರೆ.

ಇಂದು ಮುಂಜಾನೆ 4ಗಂಟೆ ಸುಮಾರಿಗೆ ಫರೀದ್‌ಕೋಟ್ ಜಿಲ್ಲೆಯಲ್ಲಿರುವ ಡಲ್ಲೇವಾಲ್‌ ಅವರ ಮನೆಗೆ ಬಂದ ಪೊಲೀಸರು, ಕನಿಷ್ಠ ಮೂರರಿಂದ ನಾಲ್ಕು ದಿನಗಳವರೆಗೆ ಮನೆಯೊಳಗೆ ಇರುವಂತೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹಲವು ನಾಯಕರು ಇದೇ ರೀತಿ ಗೃಹಬಂಧನಕ್ಕೆ ಒಳಗಾಗಿದ್ದಾರೆ ಎಂದು ರೈತ ಮುಖಂಡರು ತಿಳಿಸಿದ್ದಾರೆ. ಗೃಹ ಬಂಧನಕ್ಕೆ ಒಳಗಾದವರಲ್ಲಿ ಮಂಜಿತ್ ಸಿಂಗ್ ರೈ ಮತ್ತು ದವೀಂದರ್ ಸಿಂಗ್ ಸೇರಿದ್ದಾರೆ.

ಪೊಲೀಸರ ಕ್ರಮವನ್ನು ಟೀಕಿಸಿ ಡಲ್ಲೇವಾಲ್‌ ಅವರು ವಿಡಿಯೊವೊಂದನ್ನು ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ. ನ್ಯಾಯಕ್ಕಾಗಿ ಹೋರಾಡುತ್ತಿರುವ ರೈತರಿಗೆ ಆಮ್ ಆದ್ಮಿ ಪಕ್ಷ (ಎಎಪಿ) ಸರ್ಕಾರ ಕಿರುಕುಳ ನೀಡುತ್ತಿದೆ ಎಂದು ದೂರಿದ್ದಾರೆ.

ಪೊಲೀಸರು ಖಾನೌರಿ ಮತ್ತು ಶಂಭು ಗಡಿಯಲ್ಲಿದ್ದ ರೈತರನ್ನು ಬಲವಂತವಾಗಿ ಹೊರಹಾಕಿದ್ದಾರೆ. ಅಲ್ಲದೇ ಟ್ರ್ಯಾಕ್ಟರ್‌ಗಳು ಸೇರಿದಂತೆ ಅವರ ಹಲವಾರು ವಸ್ತುಗಳು ಕಾಣೆಯಾಗಿವೆ ಎಂದೂ ಅವರು ಆರೋಪಿಸಿದ್ದಾರೆ.

ಕಾಣೆಯಾದ ವಸ್ತುಗಳಿಗೆ ಪರಿಹಾರ ನೀಡುವುದಾಗಿ ಸರ್ಕಾರ ಹೇಳಿತ್ತು. ಆದರೆ ಪೊಲೀಸರು ಅಪರಾಧಿಗಳ ವಿರುದ್ಧ ಕ್ರಮ ಕೈಗೊಳ್ಳುವ ಬದಲು ರೈತರ ವಿರುದ್ಧ ಪ್ರಕರಣ ದಾಖಲಿಸಲು ಪ್ರಾರಂಭಿಸಿದರು. ಪೊಲೀಸರ ಈ ನಡೆಯ ವಿರುದ್ಧ ಮೇ 6 ರಂದು ನಾವು ಪ್ರತಿಭಟನೆ ನಡೆಸಲು ಯೋಜಿಸಿದ್ದೆವು. ಆದರೆ ನಮ್ಮ ಪ್ರತಿಭಟನೆಯ ದಿಕ್ಕು ತಪ್ಪಿಸಲು ಸರ್ಕಾರ ಪ್ರಯತ್ನಿಸಿದೆ ಎಂದು ಅವರು ಹೇಳಿದ್ದಾರೆ.

'ನನಗೆ ನಡೆಯಲು ಕಷ್ಟವಾಗುತ್ತಿದೆ. ಆದರೂ ಅವರು (ಪೊಲೀಸರು) ನನ್ನನ್ನು ಮನೆಗೆ ಮಾತ್ರ ಸೀಮಿತಗೊಳಿಸಿದ್ದಾರೆ. ಶಂಭು ಪೊಲೀಸ್ ಠಾಣೆಯ ಹೊರಗೆ ನಾವು ಒಂದು ದಿನ ಶಾಂತಿಯುತ ಪ್ರತಿಭಟನೆ ನಡೆಸಲು ಯೋಜಿಸಿದ್ದೆವು. ಜನರು ಎದ್ದು ಮಾತನಾಡಬೇಕು, ಇಲ್ಲದಿದ್ದರೆ ಅವರು ನಮ್ಮೆಲ್ಲರ ಧ್ವನಿಯನ್ನು ಅಡಗಿಸುತ್ತಾರೆ' ಎಂದೂ ಡಲ್ಲೇವಾಲ್‌ ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries