ಕುಂಬಳೆ: ಮಂಜೇಶ್ವರ ತಾಲೂಕು ಪುತ್ತಿಗೆ ಪಂಚಾಯಣi ವ್ಯಾಪ್ತಿಯಲ್ಲಿರುವ ಸೂರಂಬೈಲು ಎಂಬ ಪುಟ್ಟ ಗ್ರಾಮದಲ್ಲಿ ವಿದ್ಯಾಭಿಮಾನಿಗಳ ಕಠಿಣ ಪ್ರಯತ್ನದ ಫಲವಾಗಿ 1935 ರಂದು ಕನ್ನಡ ಮಾಧ್ಯಮ ಶಾಲೆಯೊಂದರ ಉದಯವಾಯಿತು. ಸೂರಂಬೈಲು ಕುಕ್ಕುಪುಣಿ ಕುಟುಂಬದವರು ಉದಾರವಾಗಿ ಸ್ಥಳದಾನ ಮಾಡಿದ್ದರು. ಸುತ್ತುಮುತ್ತಲಿನ ಮಕ್ಕಳಿಗೆ ವರದಾನವಾಗಿದ್ದ ಕನ್ನಡ ಮಾಧ್ಯಮ ಶಾಲೆ 1962 ರಲ್ಲಿ ಯುಪಿ ಶಾಲೆಯಾಗಿ ಬಡ್ತಿಹೊಂದಿತು. 2014 ರಲ್ಲಿ ಕನ್ನಡ ಮಾಧ್ಯಮ ಪ್ರೌಢಶಾಲೆಯಾಗಿ ಬಡ್ತಿಯಾಗಿ ಊರಿನ ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡುವ ಕೇಂದ್ರವಾಗಿ ಮಾರ್ಪಟ್ಟಿತು.
ಈ ವರ್ಷದ ಕೇರಳ ರಾಜ್ಯ ಶಿಕ್ಷಣ ಇಲಾಖೆಯ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಎಲ್ಲಾ ವಿದ್ಯಾರ್ಥಿಗಳೂ ಉತ್ತೀರ್ಣರಾಗಿ ನೂರು ಶೇಕಡಾ ಫಲಿತಾಂಶ ದಾಖಲಿಸುವುದರೊಂದಿಗೆ ಆರು ವಿದ್ಯಾರ್ಥಿಗಳು ಎಲ್ಲಾ ವಿಷಯಗಳಲ್ಲಿ ಎ ಪ್ಲಸ್ ಪಡೆದು ಶಾಲೆಗೆ ಊರಿಗೆ ಕೀರ್ತಿ ತಂದಿದ್ದಾರೆ. ಯಾವುದೇ ಖಾಸಗೀ ಟ್ಯೂಷನ್ ತರಗತಿಗಳಿಗೆ ಹಾಜರಾಗದೆ ಈ ವಿದ್ಯಾರ್ಥಿಗಳು ಈ ಸಾಧನೆಯನ್ನು ಮಾಡಿರುತ್ತಾರೆ. ಈ ವರ್ಷದ ರಾಷ್ಟ್ರ ಮಟ್ಟದ ಪರೀಕ್ಷೆಯಾದ ನೇಶನಲ್ ಮೀನ್ಸ್ ಕಂ ಮೆರಿಟ್ ಸ್ಕಾಲರ್ ಶಿಪ್ ಪರೀಕ್ಷೆಯಲ್ಲಿ ಇಬ್ಬರು ವಿದ್ಯಾರ್ಥಿಗಳು ಉತ್ತೀರ್ಣರಾಗಿ ಸ್ಕಾಲರ್ ಶಿಪ್ ಗೆ ಆಯ್ಕೆಯಾಗಿದ್ದು ಶಾಲೆಯ ಕೀರ್ತಿ ಇನ್ನಷ್ಟು ಮೇಲೇರಿದೆ. ಅದೂ ಅಲ್ಲದೆ ರಾಜ್ಯ ಶಿಕ್ಷಣ ಇಲಾಖೆ ನಡೆಸಿದ ಎಲ್ ಎಸ್ ಎಸ್, ಯು ಎಸ್ ಎಸ್ ಪರೀಕ್ಷೆಯಲ್ಲಿ ಒಟ್ಟು ಹತ್ತು ವಿದ್ಯಾರ್ಥಿಗಳು ಉತ್ತೀರ್ಣರಾಗಿ ಸ್ಕಾಲರ್ ಶಿಪ್ ಗೆ ಆಯ್ಕೆಯಾಗಿದ್ದಾರೆ. ಇದು ಶಾಲೆಯ ಚರಿತ್ರೆಯಲ್ಲೇ ಮೊದಲ ಹೆಜ್ಜೆ. ಶಾಲೆಯ ಮುಖ್ಯೋಪಾಧ್ಯಾಯರ ನೇತೃತ್ವದಲ್ಲಿ ಶಿಕ್ಷಕರ ಅವಿರತ ಪ್ರಯತ್ನ, ವಿದ್ಯಾರ್ಥಿಗಳ ಛಲ, ರಕ್ಷಕರ ಬೆಂಬಲದೊಂದಿಗೆ ಇದು ಸಾಧ್ಯವಾಗಿದೆ. ಈ ವರ್ಷದ ಶಾಲಾ ಕಲೋತ್ಸವ, ಮೇಳಗಳಲ್ಲಿ ವಿದ್ಯಾರ್ಥಿಗಳು ಉಪಜಿಲ್ಲಾ ಮಟ್ಟ, ಜಿಲ್ಲಾ ಮಟ್ಟಗಳಲ್ಲಿ ಉತ್ತಮ ಸಾಧನೆಯನ್ನು ಮಾಡಿರುತ್ತಾರೆ. ಕ್ರೀಡಾಮೇಳದಲ್ಲಿ ರಾಜ್ಯ ಮಟ್ಟದ ಸಾಧನೆ ಮಾಡಲು ವಿದ್ಯಾರ್ಥಿಗಳಿಗೆ ಸಾಧ್ಯವಾಗಿದೆ. ವಿದ್ಯಾರ್ಥಿಗಳಿಗೆ ಬೆಳಗ್ಗೆ, ಮಧ್ಯಾಹ್ನ ಮತ್ತು ಸಂಜೆಯ ವೇಳೆಗಳಲ್ಲಿ ವಿಶೇಷ ತರಗತಿಗಳನ್ನು ನಡೆಸಿ ಸಾಧನೆಗೆ ಪ್ರೇರಣೆ ನೀಡಲಾಗುತ್ತಿರುವುದು ಶಾಲೆಯ ಹಿರಿಮೆಯಾಗಿದೆ.





