ಕೋಲ್ಕತ್ತ: ಇಲ್ಲಿನ ಹಲವು ನಗರಗಳಲ್ಲಿ ರಾತ್ರಿ ವೇಳೆ ಡ್ರೋನ್ ಮಾದರಿಯಎಂಟು-ಹತ್ತು ವಸ್ತುಗಳು ಹಾರಾಟ ನಡೆಸಿರುವುದು ಕಂಡುಬಂದಿದೆ. ಆ ವಸ್ತುಗಳನ್ನು ಬೇಹುಗಾರಿಕೆಗೆ ಬಳಸಿರುವ ಶಂಕೆ ವ್ಯಕ್ತವಾಗಿದ್ದು, ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿರುವುದಾಗಿ ಹೇಳಿದ್ದಾರೆ.
ಇದಕ್ಕೆ ಸಂಬಂಧಿಸಿದ ವರದಿ ಸಲ್ಲಿಸುವಂತೆ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಕೇಂದ್ರ ಸರ್ಕಾರ ಸೂಚನೆಯನ್ನೂ ನೀಡಿದೆ.
ಹೇಸ್ಟಿಂಗ್ ನಗರ, ವಿದ್ಯಾಸಾಗರ ಸೇತು ಹಾಗೂ ಮೈದಾನ ಪ್ರದೇಶದಲ್ಲಿ ಸೋಮವಾರ ರಾತ್ರಿ ಡ್ರೋನ್ ಮಾದರಿಯ ವಸ್ತುಗಳ ಹಾರಾಟ ಕಂಡುಬಂದಿದೆ. ಪಾರ್ಕ್ ಸರ್ಕಸ್, ವಿಲಿಯಂ ಫೋರ್ಟ್‌ನ ಬಳಿಯೂ ಹಾರಾಟ ನಡೆಸಿ, ನಾಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ವಿಶೇಷ ತನಿಖಾ ತಂಡ (ಎಸ್‌ಟಿಎಫ್) ಹಾಗೂ ಕೋಲ್ಕತ್ತ ಪೊಲೀಸರು ಎಲ್ಲಾ ಆಯಾಮದಲ್ಲೂ ತನಿಖೆ ಆರಂಭಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

