ಇಸ್ಲಾಮಾಬಾದ್: ದಕ್ಷಿಣ ಏಷ್ಯಾದಲ್ಲಿ ಶಾಂತಿ ಮತ್ತು ಸ್ಥಿರತೆ ಕಾಯ್ದುಕೊಳ್ಳುವ ಉದ್ದೇಶದಿಂದ ಚೀನಾ ಯಾವಾಗಲೂ ಪಾಕಿಸ್ತಾನವನ್ನು ಬೆಂಬಲಿಸಲಿದೆ ಎಂದು ಪಾಕ್‌ನಲ್ಲಿರುವ ಚೀನಾದ ರಾಯಭಾರಿ ಜಿಯಾಂಗ್ ಜೈಡಾಂಗ್ ತಿಳಿಸಿದರು.
ಪಹಲ್ಗಾಮ್‌ನಲ್ಲಿ ಭಯೋತ್ಪಾದಕರ ದಾಳಿಯ ಬಳಿಕ ನವದೆಹಲಿ ಮತ್ತು ಇಸ್ಲಾಮಾಬಾದ್ ನಡುವೆ ಉದ್ವಿಗ್ನತೆ ಉಂಟಾಗಿರುವ ನಡುವೆಯೇ ಅವರು, ಪಾಕ್ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
ಪಾಕ್ ಮತ್ತು ಭಾರತ ನಡುವಿನ ಉದ್ವಿಗ್ನ ಪರಿಸ್ಥಿತಿ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಜೈಡಾಂಗ್ ಮತ್ತು ಅಧ್ಯಕ್ಷ ಜರ್ದಾರಿ ಮಾತುಕತೆ ನಡೆಸಿದರು ಎಂದು 'ರೇಡಿಯೊ ಪಾಕಿಸ್ತಾನ್' ತಿಳಿಸಿದೆ.
'ಚೀನಾ ಮತ್ತು ಪಾಕಿಸ್ತಾನದ ನಡುವೆ ದೀರ್ಘ ಕಾಲದಿಂದ ಉತ್ತಮ ಬಾಂದವ್ಯ ಇದೆ. ಸವಾಲುಗಳು ಎದುರಾದಾಗ ಎರಡೂ ಮಿತ್ರ ದೇಶಗಳು ಪರಸ್ಪರರ ನೆರವಿಗೆ ಧಾವಿಸಿವೆ' ಎಂದು ಚೀನಿ ರಾಯಭಾರಿ ಹೇಳಿದರು.
ಪಾಕ್ ಸೇನೆಗೆ ರಾಜಕೀಯ ಪಕ್ಷಗಳ ಬೆಂಬಲ
ಇಸ್ಲಾಮಾಬಾದ್ : ಭಾರತದ ಸಂಭಾವ್ಯ ದಾಳಿಯನ್ನು ಸಮರ್ಥವಾಗಿ ಎದುರಿಸಲು ಪಾಕಿಸ್ತಾನದ ಸೇನೆಗೆ ಅಲ್ಲಿನ ರಾಜಕೀಯ ಪಕ್ಷಗಳು ಪೂರ್ಣ ಬೆಂಬಲ ವ್ಯಕ್ತಪಡಿಸಿವೆ ಎಂದು ಮೂಲಗಳು ತಿಳಿಸಿವೆ. ಪಾಕ್‌ನ ಸೇನಾ ಮತ್ತು ನಾಗರಿಕ ಅಧಿಕಾರಿಗಳು ದೇಶದ ರಾಜಕೀಯ ಪಕ್ಷಗಳ ನಾಯಕರ ಜತೆಗೆ ಮಹತ್ವದ ಸಭೆ ನಡೆಸಿ ಚರ್ಚೆ ನಡೆಸಿದರು. ಉಭಯ ದೇಶಗಳ ನಡುವೆ ಉಂಟಾಗಿರುವ ಉದ್ವಿಗ್ನತೆ ಮತ್ತು ಪಾಕಿಸ್ತಾನ ಕೈಗೊಂಡಿರುವ ಸಿದ್ಧತಾ ಕ್ರಮಗಳ ಕುರಿತು ಈ ವೇಳೆ ಅಧಿಕಾರಿಗಳು ಮಾಹಿತಿ ನೀಡಿದರು ಎಂದು ಮೂಲಗಳನ್ನು ಉಲ್ಲೇಖಿಸಿ ಡಾನ್ ಪತ್ರಿಕೆ ವರದಿ ಮಾಡಿದೆ. 'ಭಾರತ ಯಾವುದೇ ರೀತಿಯ ದುಸ್ಸಾಹಸಕ್ಕೆ ಕೈಹಾಕಿದರೆ ತಕ್ಕ ಪಾಠ ಕಲಿಸುವಂತೆ' ರಾಜಕೀಯ ಪಕ್ಷಗಳ ನಾಯಕರು ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು ಎಂದು ಮೂಲಗಳು ತಿಳಿಸಿವೆ.




