ನವದೆಹಲಿ: 'ಇಂಡಿಯಾ ಟುಡೆ' ಮಾಧ್ಯಮ ಸಮೂಹದ ಮುಖ್ಯಸ್ಥ ಅರುಣ್ ಪುರಿ ಅವರ ವಿರುದ್ಧದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ. ಕಳೆದ ವರ್ಷ ಪ್ರಸಾರವಾದ ಚರ್ಚೆಯೊಂದಕ್ಕೆ ಸಂಬಂಧಿಸಿದ ಮಾನನಷ್ಟ ಪ್ರಕರಣ ಇದಾಗಿದೆ.
ಅರುಣ್ ಪುರಿ ಅವರ ಪರವಾಗಿ ಹಾಜರಿದ್ದ ಹಿರಿಯ ವಕೀಲ ಸಿದ್ಧಾರ್ಥ ಲೂಥ್ರಾ ಅವರ ವಾದ ಆಲಿಸಿದ ನ್ಯಾಯಮೂರ್ತಿಗಳಾದ ಜೆ.ಬಿ.ಪಾರ್ದೀವಾಲಾ ಮತ್ತು ಆರ್. ಮಹಾದೇವನ್ ಅವರು ಇರುವ ವಿಭಾಗೀಯ ಪೀಠವು ಈ ತಡೆಯಾಜ್ಞೆ ನೀಡಿದೆ.
ಮಾನನಷ್ಟ ಮೊಕದ್ದಮೆ ಪ್ರಕ್ರಿಯೆಯು ಪಟ್ನಾದ ಮುಖ್ಯ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ನಡೆಯುತ್ತಿತ್ತು. ತಡೆಯಾಜ್ಞೆಯನ್ನು ಮೇ 19ರಂದು ನೀಡಲಾಗಿದೆ.
ಮಾನನಷ್ಟ ಮೊಕದ್ದಮೆಯ ವಿಚಾರಣೆಗೆ ಹಾಜರಾಗುವಂತೆ ಅರುಣ್ ಪುರಿ ಅವರಿಗೆ ಸಮನ್ಸ್ ಜಾರಿಗೊಳಿಸಲಾಗಿತ್ತು. ಇದನ್ನು ಪ್ರಶ್ನಿಸಿ ಅವರು ಪಟ್ನಾ ಹೈಕೋರ್ಟ್ ಮೊರೆ ಹೋಗಿದ್ದರು. ಆದರೆ ಅವರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು. ನಂತರ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.




