ಟೆಲ್ ಅವೀವ್: ಏ.30ರ ಬುಧವಾರ ಪಶ್ಚಿಮ ಜೆರುಸಲೇಂನಿಂದ 30 ಕಿಮೀ ದೂರದಲ್ಲಿ ಕಾಣಿಸಿಕೊಂಡ ಕಾಡ್ಗಿಚ್ಚು ಇಸ್ರೇಲ್ ನಾದ್ಯಂತ ವ್ಯಾಪಕವಾಗಿ ಹಬ್ಬುತ್ತಿದ್ದು, ಗುರುವಾರ ಈ ಕಾಡ್ಗಿಚ್ಚಿಗೆ ಅರಣ್ಯಗಳು ಹಾಗೂ ಹೊಲಗಳು ಸುಟ್ಟು ಭಸ್ಮಗೊಂಡಿವೆ. ಕಾಡ್ಗಿಚ್ಚು ಪೀಡಿತ ಪ್ರದೇಶದಿಂದ ಇಸ್ರೇಲ್ ನ ಎರಡು ಪ್ರಧಾನ ನಗರಗಳನ್ನು ಸಂಪರ್ಕಿಸುವ ಮುಖ್ಯ ರಸ್ತೆಯನ್ನು ಮತ್ತೆ ತೆರೆಯುವಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.
ಬುಧವಾರದಂದು ಮುಖ್ಯ ಜೆರುಸಲೇಂ-ಟೆಲ್ ಅವೀವ್ ಹೆದ್ದಾರಿಯವರೆಗೆ ಕಾಡ್ಗಿಚ್ಚು ಹಬ್ಬುತ್ತಿದ್ದಂತೆ, ಇಸ್ರೇಲ್ ಪ್ರಧಾನಿ ನೆತನ್ಯಾಹು ಬೆಂಜಮಿನ್ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ. ಹೀಗಾಗಿ, ಈ ಹೆದ್ದಾರಿ ಮಾರ್ಗದ ಅಕ್ಕಪಕ್ಕ ವಾಸಿಸುತ್ತಿರುವ ಸಮುದಾಯಗಳ ಸಾವಿರಾರು ಮಂದಿಯನ್ನು ತೆರವುಗೊಳಿಸಲು, ಈ ಮಾರ್ಗವನ್ನು ಪೊಲೀಸರು ಮುಚ್ಚಿದ್ದರು.
ಈ ಭೀಕರ ಕಾಡ್ಗಿಚ್ಚಿನಿಂದಾಗಿ ಪಶ್ಚಿಮ ಜೆರುಸಲೇಂನಿಂದ ಸುಮಾರು 30 ಕಿಮೀ ದೂರವಿರುವ ತಮ್ಮ ನಿವಾಸಗಳನ್ನು ನೂರಾರು ಮಂದಿ ಅನಿವಾರ್ಯವಾಗಿ ತೊರೆಯುವಂತಾಗಿದೆ. ಈ ಕಾಡ್ಗಿಚ್ಚಿನ ತೀವ್ರತೆಯಿಂದಾಗಿ, ಇಸ್ರೇಲ್ ನಲ್ಲಿ ಅತಿ ಹೆಚ್ಚು ವೀಕ್ಷಕರನ್ನು ಹೊಂದಿರುವ ಚಾನೆಲ್ 12 ದೂರದರ್ಶನ ಜಾಲವು, ಪಶ್ಚಿಮ ಜೆರುಸಲೇಂ ನಗರದಿಂದ 10 ಮೈಲಿ ದೂರವಿರುವ ತನ್ನ ಸ್ಟುಡಿಯೊದಿಂದ ಬಿತ್ತರಿಸುತ್ತಿದ್ದ ವಾರ್ತೆಯನ್ನು ಮಧ್ಯದಲ್ಲೇ ಸ್ಥಗಿತಗೊಳಿಸಬೇಕಾಯಿತು ಎಂದು ವರದಿಯಾಗಿದೆ.
ಕಾಡ್ಗಿಚ್ಚಿನ ತೀವ್ರತೆಯನ್ನು ಭಾರಿ ವೇಗವಾಗಿ ಬೀಸುತ್ತಿರುವ ಗಾಳಿ ಮತ್ತಷ್ಟು ಹೆಚ್ಚಿಸಿದ್ದರಿಂದಾಗಿ, 1948ರ ಇಸ್ರೇಲ್ ಸಂಸ್ಥಾಪನಾ ದಿನದ ಹಲವು ಸಂಭ್ರಮಾಚರಣೆಗಳು ರದ್ದುಗೊಂಡಿವೆ. ಇದರಿಂದಾಗಿ, ಪೂರ್ವಯೋಜಿತ ಸಂಭ್ರಮಾಚರಣೆ ಬದಲು, ಮುಂಚಿತವಾಗಿಯೇ ಚಿತ್ರೀಕರಿಸಲಾಗಿದ್ದ ದೀಪ ಬೆಳಗುವ ತಾಲೀಮು ಕಾರ್ಯಕ್ರಮವನ್ನು ದೇಶಾದ್ಯಂತ ಪ್ರಸಾರ ಮಾಡಲಾಗಿದೆ.




