ನವದೆಹಲಿ: ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳ ಒಕ್ಕೂಟವು 'ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆ'ಗಾಗಿ (ಸಿಎಲ್‌ಎಟಿ) ಪ್ರಶ್ನಾವಳಿಗಳನ್ನು ರೂಪಿಸುವಾಗ ಉದಾಸೀನ ತೋರಿದ್ದು ಸರಿಯಲ್ಲ ಎಂದು ಸುಪ್ರೀಂ ಕೋರ್ಟ್ ಬುಧವಾರ ಬೇಸರ ವ್ಯಕ್ತಪಡಿಸಿದೆ.
ಪರೀಕ್ಷೆಯ ಪ್ರಶ್ನೆಪತ್ರಿಕೆಯಲ್ಲಿ ಕೆಲ ತಪ್ಪು ಪ್ರಶ್ನೆಗಳನ್ನು ಕೇಳಲಾಗಿದೆ ಎಂಬುದನ್ನು ಗಮನಿಸಿದ ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ಆಗಸ್ಟೀನ್ ಜಾರ್ಜ್ ಮಸಿಹ್ ಅವರ ಪೀಠ ಅಸಮಾಧಾನ ವ್ಯಕ್ತಪಡಿಸಿತು.
'ಕ್ಲಾಟ್' ಪರೀಕ್ಷೆಗೆ ಸಂಬಂಧಿಸಿದಂತೆ ಶಾಶ್ವತ ಕಾರ್ಯವಿಧಾನ ಅಸ್ತಿತ್ವಕ್ಕೆ ತರುವಂತೆ 2018ರಲ್ಲಿ ನೀಡಿದ್ದ ತೀರ್ಪಿನಲ್ಲಿಯೇ ನಿರ್ದೇಶಿಸಲಾಗಿತ್ತು. ಆದರೂ ಇಲ್ಲಿಯವರೆಗೂ ಅದೇಕೆ ಕಾರ್ಯರೂಪಕ್ಕೆ ಬಂದಿಲ್ಲ ಎಂದು ಪೀಠ ಪ್ರಶ್ನಿಸಿತು.
ಈ ಸಂಬಂಧ ಪ್ರತಿಕ್ರಿಯಿಸುವಂತೆ ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿದ ಪೀಠವು, ವಿಚಾರಣೆಯನ್ನು ಇದೇ 16ಕ್ಕೆ ಮುಂದೂಡಿತು.




