ಲಾಹೋರ್: ತನ್ನ ವಾಯು ಪ್ರದೇಶದಲ್ಲಿ ಭಾರತೀಯ ವಿಮಾನಗಳು ಹಾರಾಟ ನಡೆಸುವುದರ ಮೇಲಿನ ನಿರ್ಬಂಧವನ್ನು ಪಾಕಿಸ್ತಾನವು ಜೂನ್ 24ರವರೆಗೆ ವಿಸ್ತರಿಸಿದೆ. 'ಪಾಕಿಸ್ತಾನ ವಿಮಾನ ನಿಲ್ದಾಣ ಪ್ರಾಧಿಕಾರ'ವು ಈ ಬಗ್ಗೆ ಶುಕ್ರವಾರ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ಜೂನ್ 24ರ ಮುಂಜಾನೆ 4:59ರವರೆಗೆ ಈ ನಿರ್ಬಂಧ ಜಾರಿಯಲ್ಲಿರಲಿದೆ.
ಭಾರತೀಯ ವಿಮಾನಯಾನ ಸಂಸ್ಥೆಗಳು, ಅಲ್ಲಿಂದ ನಿರ್ವಹಿಸಲ್ಪಡುವ, ಒಡೆತನದ, ನೋಂದಾಯಿತ ಮತ್ತು ಗುತ್ತಿಗೆಗೆ ಪಡೆದ ಎಲ್ಲಾ ವಿಮಾನಗಳು ನಿಷೇಧಕ್ಕೆ ಒಳಪಟ್ಟಿರುತ್ತವೆ.
ಇದೇ ರೀತಿ ಭಾರತೀಯ ಸೇನಾ ವಿಮಾನಗಳೂ ಪಾಕಿಸ್ತಾನದ ವಾಯುಪ್ರದೇಶವನ್ನು ಬಳಸಲು ಅನುಮತಿಸಲಾಗುವುದಿಲ್ಲ ಎಂದು ಅದು ತಿಳಿಸಿದೆ.
ಪೆಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿ ಬಳಿಕ ಉಂಟಾಗಿದ್ದ ಉಭಯ ದೇಶಗಳ ನಡುವಿನ ಸೇನಾ ಸಂಘರ್ಷದ ಸಮಯದಲ್ಲಿ ಭಾರತೀಯ ವಿಮಾನಗಳಿಗೆ ಪಾಕಿಸ್ತಾನ ನಿಷೇಧ ಹೇರಿ, ಮೇ 23ಕ್ಕೆ ಒಂದು ತಿಂಗಳು ಕಳೆಯಿತು.
ಅಂತರರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆಯ ನಿಯಮಗಳ ಪ್ರಕಾರ ಒಂದು ತಿಂಗಳಿಗಿಂತ ಹೆಚ್ಚು ಸಮಯ ವಾಯು ಪ್ರದೇಶದ ಮೇಲೆ ವಿಮಾನ ಹಾರಾಟವನ್ನು ನಿರ್ಬಂಧಿಸುವಂತಿಲ್ಲ. ಹೀಗಾಗಿ ಪಾಕಿಸ್ತಾನವು ನಿಷೇಧದ ಅವಧಿಯನ್ನು ವಿಸ್ತರಿಸಿದೆ.




