ನ್ಯೂಯಾರ್ಕ್: ಭಾರತ ಮತ್ತು ಪಾಕಿಸ್ತಾನ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ, ಅಮೆರಿಕ ಈ ವಿಚಾರದಲ್ಲಿ ಭಾಗಿಯಾಗುವುದಿಲ್ಲ, ಮೂಲಭೂತವಾಗಿ ನಮಗೂ ಇದಕ್ಕೂ ಸಂಬಂಧವಿಲ್ಲ ಎಂದು ಅಮೆರಿಕ ಹೇಳಿದೆ.
ಎರಡೂ ದೇಶಗಳಿಂದ ಪರಮಾಣು ದಾಳಿಯಾದರೆ ಉಂಟಾಗುವ ಸಮಸ್ಯೆ ಬಗ್ಗೆ ನಮಗೆ ಕಳವಳವಿದೆ ಎಂದು ಅಮೆರಿಕ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್ ಹೇಳಿದ್ದಾರೆ.
ನಾವು ಯಾವ ದೇಶವನ್ನೂ ನಿಯಂತ್ರಿಸಲು ಸಾಧ್ಯವಿಲ್ಲ. ಭಾರತಕ್ಕೆ ಪಾಕಿಸ್ತಾನದ ಮೇಲೆ ತನ್ನದೇ ಆದ ಅಸಮಾಧಾನವಿದೆ. ಪಾಕಿಸ್ತಾನ ಭಾರತಕ್ಕೆ ಪ್ರತಿಕ್ರಿಯಿಸಿದೆ. ಈ ದಾಳಿಯನ್ನು ಕಡಿಮೆ ಮಾಡಲು ನಾವು ಏನೆಲ್ಲ ಪ್ರಯತ್ನ ಮಾಡಬಹುದೋ ಅದನ್ನು ಮಾಡುತ್ತೇವೆ. ಆದರೆ ಯುದ್ಧದಲ್ಲಿ ನಾವು ಭಾಗಿಯಾಗುವುದಿಲ್ಲ. ಅದು ನಮಗೆ ಸಂಬಂಧವಿಲ್ಲದ್ದು, ಅಮೆರಿಕದ ನಿಯಂತ್ರಣ ಸಾಮರ್ಥ್ಯಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ' ಎಂದು ವ್ಯಾನ್ಸ್ ಹೇಳಿದ್ದಾರೆ.
ಶಸ್ತ್ರಾಸ್ತ್ರ ತ್ಯಜಿಸುವಂತೆ ಭಾರತಕ್ಕಾಗಲೀ ಪಾಕಿಸ್ತಾನಕ್ಕಾಗಲೀ ಅಮೆರಿಕ ಹೇಳಲು ಸಾಧ್ಯವಿಲ್ಲ. ಈ ವಿಚಾರದಲ್ಲಿ ನಾವು ರಾಜತಾಂತ್ರಿಕ ಮಾರ್ಗವಾಗಿ ಮುಂದುವರಿಯುತ್ತೇವೆ. ಇದು ಪ್ರಾದೇಶಿಕ ಸಂಘರ್ಷವಾಗುವಷ್ಟು ದೊಡ್ಡದಾಗದಿರಲಿ, ಅಣ್ವಸ್ತ್ರ ಸಮರಕ್ಕೆ ಎಡೆಮಾಡಿಕೊಡದಿರಲಿ ಎಂಬುದು ನಮ್ಮ ಆಶಯವಾಗಿದೆ. ಖಂಡಿತವಾಗಿಯೂ ನಾವು ಈ ಬಗ್ಗೆ ಚಿಂತಿತರಾಗಿದ್ದೇವೆ. ಭಾರತ ಮತ್ತು ಪಾಕಿಸ್ತಾನದ ಮುಖ್ಯಸ್ಥರು ಇದು ಪರಮಾಣು ಯುದ್ಧವಾಗದಂತೆ ನೋಡಿಕೊಳ್ಳಬೇಕು, ಒಂದು ವೇಳೆ ಪರಮಾಣು ಯುದ್ಧವಾದಲ್ಲಿ ದೊಡ್ಡ ಹಾನಿಯುಂಟಾಗುತ್ತದೆ ಎಂದು ವ್ಯಾನ್ಸ್ ಅಭಿಪ್ರಾಯಪಟ್ಟಿದ್ದಾರೆ.




