ಶ್ರೀನಗರ: ಅಮರನಾಥ ಯಾತ್ರೆ ಹಾಗೂ ಖೀರ್ ಭವಾನಿ ಮೇಳದ ಸಮಯದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಆಶ್ವಾಸನೆ ನೀಡಿದರು.
ಮಂಗಳವಾರ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಅವರ ಸ್ವಕೇತ್ರವಾದ ಗಂದರ್‌ಬಾಲ್ ಭೇಟಿಯ ವೇಳೆ ಖೀರ್ ಭವಾನಿ ಮಂದಿರಕ್ಕೆ ಭೇಟಿ ನೀಡಿದ ವೇಳೆ ಪತ್ರಕತ್ರರೊಂದಿಗೆ ಮಾತನಾಡಿದರು.
ಧಾರ್ಮಿಕ ಕ್ಷೇತ್ರಗಳ ಯಾತ್ರೆಗಾಗಿ ಈಗಾಗಲೇ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಭಯೋತ್ಪಾದಕರ ಬೆದರಿಕೆಯ ಕಾರಣ, ಅಗತ್ಯ ಸುರಕ್ಷಾ ಕ್ರಮಗಳನ್ನು ಕೂಡ ಕೈಗೊಳ್ಳಲಾಗಿದೆ. ಮೊದಲಿಗೆ ಖೀರ್ ಭವಾನಿ ಮೇಳವನ್ನು ಯಶಸ್ವಿಯಾಗಿಸುವುದು ನಮ್ಮ ಗುರಿ, ಆನಂತರ ಅಮರನಾಥ ಯಾತ್ರೆಯ ಕುರಿತು ಗಮನ ಹರಿಸುತ್ತೇವೆ. ಎಲ್ಲಾ ಯಾತ್ರಿಗಳು ಸುರಕ್ಷಿತವಾಗಿ ಮರಳಿ ಬರಬೇಕು ಎನ್ನುವುದು ನಮ್ಮ ಗುರಿಯಾಗಿದೆ ಎಂದರು.
ಸದ್ಯಕ್ಕೆ ಅಮರನಾಥ ಯಾತ್ರೆ ಹಾಗೂ ಖೀರ್ ಭವಾನಿ ಮೇಳವನ್ನು ಯಶಸ್ವಿಯಾಗಿಸುವ ಗುರಿಯಿದೆ. ಯಾತ್ರೆಯ ನಂತರ ಪ್ರವಾಸೋದ್ಯಮದ ಕಡೆಗೆ ಗಮನ ನೀಡುತ್ತೇವೆ ಎಂದರು.
ಕಾಶ್ಮೀರಿ ಪಂಡಿತರ ಪ್ರಮುಖ ಧಾರ್ಮಿಕ ಕಾರ್ಯಕ್ರಮವಾಗಿರುವ ಖೀರ್ ಭವಾನಿ ಮೇಳವು ಜೂನ್ ಮೊದಲ ವಾರದಲ್ಲಿ ಜರುಗಲಿದ್ದು, ದೇಶದಾದ್ಯಂತವಿರುವ ಕಾಶ್ಮೀರಿ ಪಂಡಿತರು ಇದರಲ್ಲಿ ಭಾಗವಹಿಸುತ್ತಾರೆ. ಜುಲೈ 3ರಿಂದ ಈ ಬಾರಿಯ ಅಮರನಾಥ ಯಾತ್ರೆಯು ಆರಂಭವಾಗಲಿದೆ.
ಪಹಲ್ಗಾಮ್ ಉಗ್ರ ದಾಳಿಯ ನಂತರ ಕಣಿವೆ ರಾಜ್ಯಕ್ಕೆ ತೆರಳಲು ಪ್ರವಾಸಿಗರು ಹಿಂದೇಟಾಕುತ್ತಿದ್ದಾರೆ.

