ನವದೆಹಲಿ: ಅಸ್ಸಾಂ ವಿಧಾನಸಭೆಗೆ ಮುಂದಿನ ವರ್ಷ ಚುನಾವಣೆ ನಡೆಯಲಿದ್ದು, ಲೋಕಸಭಾ ಸಂಸದ ಗೌರವ್ ಗೊಗೊಯಿ ಅವರನ್ನು ಕಾಂಗ್ರೆಸ್ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಇದುವರೆಗೂ ಭೂಪೇನ್ ಕುಮಾರ್ ಬೋರಾ ಅಧ್ಯಕ್ಷರಾಗಿದ್ದರು.
ಅದೇ ರೀತಿ, ಜಾಕೀರ್ ಹುಸೇನ್ ಸಿಕ್ದರ್, ರೊಸೆಲಿನಾ ಟಿರ್ಕೆ, ಪ್ರದೀಪ್ ಸರ್ಕಾರ್ ಅವರನ್ನು ರಾಜ್ಯ ಘಟಕದ ಕಾರ್ಯಾಧ್ಯಕ್ಷರನ್ನಾಗಿ ನೇಮಿಸಿದೆ.
ಅಸ್ಸಾಂ ವಿಧಾನಸಭೆಯ ಈಗಿನ ಅವಧಿ 2026ರ ಮೇ 20ಕ್ಕೆ ಕೊನೆಗೊಳ್ಳಲಿದೆ. ಸತತ ಎರಡು ಅವಧಿಗೆ ಅಧಿಕಾರ ಕಳೆದುಕೊಂಡಿರುವ ಕಾಂಗ್ರೆಸ್ ಪಕ್ಷವು ಈ ಬಾರಿ ಅಧಿಕಾರ ಹಿಡಿಯಲು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದೆ.
'ತಕ್ಷಣದಿಂದಲೇ ಜಾರಿಗೆ ಬರುವಂತೆ ಅಸ್ಸಾಂ ಪ್ರದೇಶ ಕಾಂಗ್ರೆಸ್ ಸಮಿತಿಗೆ ನಾಲ್ಕು ಮಂದಿಯನ್ನು ಕಾಂಗ್ರೆಸ್ ಅಧ್ಯಕ್ಷರು ನೇಮಕ ಮಾಡಿದ್ದಾರೆ' ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ತಿಳಿಸಿದ್ದಾರೆ.
'ನಿರ್ಗಮಿತ ಅಧ್ಯಕ್ಷ ಬೋರಾ ಅವರ ಸೇವೆಗೆ ಪಕ್ಷ ಮೆಚ್ಚುಗೆ ವ್ಯಕ್ತಪಡಿಸುತ್ತದೆ' ಎಂದು ತಿಳಿಸಿದ್ದಾರೆ.
'ಇದುವರೆಗೂ ಎಐಸಿಸಿ ಕಾರ್ಯದರ್ಶಿಯಾಗಿದ್ದ ರೊಸೆಲಿನಾ ತಿರ್ಕೀ ಅವರನ್ನು ಈಗಿನ ಜವಾಬ್ದಾರಿಯಿಂದ ಮುಕ್ತಗೊಳಿಸಲಾಗಿದೆ' ಎಂದು ವೇಣುಗೋಪಾಲ್ ತಿಳಿಸಿದ್ದಾರೆ.
ಗೌರವ್ ಗೊಗೊಯಿ ಅವರು ಅಸ್ಸಾಂನ ಮಾಜಿ ಮುಖ್ಯಮಂತ್ರಿ ತರುಣ್ ಗೊಗೊಯಿ ಮಗ. ಜೊರ್ಹಾಟ್ ಕ್ಷೇತ್ರದ ಸಂಸದರಾಗಿದ್ದು, ಲೋಕಸಭೆಯಲ್ಲಿ ವಿರೋಧ ಪಕ್ಷದ ಉಪನಾಯಕರಾಗಿದ್ದಾರೆ.




