ಢಾಕಾ: ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ಭಾರತವು ಪಾಕಿಸ್ತಾನದ ಮೇಲೆ ದಾಳಿ ನಡೆಸಿದರೆ, ಬಾಂಗ್ಲಾದೇಶವು ಚೀನಾದೊಂದಿಗೆ ಸೇರಿ ಭಾರತದ ಏಳು ಈಶಾನ್ಯ ರಾಜ್ಯಗಳನ್ನು ವಶಕ್ಕೆ ಪಡೆಯಬೇಕು ಎಂದು ಬಾಂಗ್ಲಾ ಸೇನೆಯ ನಿವೃತ್ತ ಅಧಿಕಾರಿ ಮತ್ತು ಮುಖ್ಯ ಸಲಹೆಗಾರ ಮೊಹಮ್ಮದ್ ಯೂನುಸ್ ಅವರ ನಿಕಟವರ್ತಿ ಸಲಹೆ ನೀಡಿದ್ದಾರೆ.
ಮೇಜರ್ ಜನರಲ್ (ನಿವೃತ್ತ) ಎಎಲ್‌ಎಮ್ ಫಜ್ಲೂರ್ ರಹಮಾನ್ ಅವರು, 'ಈಶಾನ್ಯ ರಾಜ್ಯಗಳನ್ನು ವಶಕ್ಕೆ ಪಡೆಯುವ ಬಗ್ಗೆ ಚೀನಾದೊಂದಿಗೆ ಚರ್ಚೆ ಆರಂಭಿಸಬೇಕಿದೆ' ಎಂದೂ ಹೇಳಿದ್ದಾರೆ.
ರಹಮಾನ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಈ ಹೇಳಿಕೆ ಬಗ್ಗೆ ಬಾಂಗ್ಲಾ ಮಧ್ಯಂತರ ಸರ್ಕಾರ ಅಂತರ ಕಾಯ್ದುಕೊಂಡಿದೆ.
'ಈ ಹೇಳಿಕೆಯು ಸರ್ಕಾರದ ನೀತಿ ನಿರ್ಧಾರಗಳ ಮೇಲೆ ಪರಿಣಾಮ ಬೀರುವುದಿಲ್ಲ. ಇಂಥ ಮಾತುಗಳನ್ನು ಸರ್ಕಾರ ಬೆಂಬಲಿಸುವುದೂ ಇಲ್ಲ, ಸಮರ್ಥಿಸುವುದೂ ಇಲ್ಲ' ಎಂದು ವಿದೇಶಾಂಗ ಸಚಿವಾಲಯ ಸ್ಪಷ್ಟನೆ ನೀಡಿದೆ.
ಯೂನುಸ್ ಅವರ ಸರ್ಕಾರವು ರಹಮಾನ್ ಅವರನ್ನು ರಾಷ್ಟ್ರೀಯ ಸ್ವತಂತ್ರ ಆಯೋಗದ ಮುಖ್ಯಸ್ಥರನ್ನಾಗಿ 2024ರಲ್ಲಿ ನೇಮಕ ಮಾಡಿದೆ. ಈ ಆಯೋಗವು 2009ರ ಬಾಂಗ್ಲಾ ರೈಫಲ್ಸ್ ದಂಗೆಯಲ್ಲಿನ ಹತ್ಯೆ ಬಗ್ಗೆ ತನಿಖೆ ನಡೆಸುತ್ತಿದೆ.




