HEALTH TIPS

ಮಂಗಳೂರು: ಸಸ್ಯ ವಿಜ್ಞಾನಿ ಡಾ.ಸೂರ್ಯಪ್ರಕಾಶ್ ಶೆಣೈ ನಿಧನ

ಮಂಗಳೂರು: ಪಿಲಿಕುಳದ ಡಾ. ಶಿವರಾಮ ಕಾರಂತ ನಿಸರ್ಗಧಾಮದ ಸಸ್ಯಶಾಸ್ತ್ರ ವಿಭಾಗದಲ್ಲಿ ಪ್ರಧಾನ ವಿಜ್ಞಾನಿಯಾಗಿ ಸೇವೆ ಸಲ್ಲಿಸುತ್ತಿದ್ದ ಡಾ. ಸೂರ್ಯಪ್ರಕಾಶ್ ಶೆಣೈ (58) ಅನಾರೋಗ್ಯದಿಂದ ಭಾನುವಾರ ಬೆಳಗ್ಗೆ ಕಡಬದ ಹೊಸ್ಮಠದಲ್ಲಿರುವ ತಮ್ಮ ಸ್ವಗೃಹದಲ್ಲಿ ನಿಧನರಾದರು.

ಪಶ್ಚಿಮ ಘಟ್ಟದ ಸಸ್ಯಸಂಪತ್ತಿಗೆ ಜೀವ ನೀಡುವಂತೆ, ಪಿಲಿಕುಳದ 85 ಎಕರೆ ಪ್ರದೇಶದಲ್ಲಿ ಸ್ಥಾಪಿತವಾಗಿ ರುವ 'ಸಸ್ಯಕಾಶಿ' ಎಂಬ ಸಸ್ಯೋದ್ಯಾನ ನಿರ್ಮಾಣದಲ್ಲಿ ಅವರು ಪ್ರಮುಖ ಪಾತ್ರವಹಿಸಿದ್ದರು.

ಪಶ್ಚಿಮ ಘಟ್ಟದ ಅರಣ್ಯ ಪ್ರದೇಶಗಳಿಗೆ ಭೇಟಿನೀಡಿ, ಬೀಜ ಸಂಗ್ರಹಿಸಿ ಗಿಡಗಳನ್ನು ಬೆಳೆಸುವ ಮೂಲಕ ಪರಿಸರ ಮತ್ತು ಜೀವವೈವಿಧ್ಯ ರಕ್ಷಣೆಗೆ ಅಪಾರ ಕೊಡುಗೆ ನೀಡಿದ್ದರು.

ಮಂಗಳೂರು ವಿಶ್ವವಿದ್ಯಾನಿಲಯದ ಅನ್ವಯಿಕ ಸಸ್ಯಶಾಸ್ತ್ರ ವಿಭಾಗದ ಮೊದಲ ಎಂ.ಎಸ್ಸಿ. (1988-90) ಬ್ಯಾಚ್‌ನ ವಿದ್ಯಾರ್ಥಿಯಾಗಿದ್ದು, ನಂತರ ಅದೇ ವಿಭಾಗದಿಂದ ಎಂ.ಫಿಲ್ ಹಾಗೂ ಪಿಎಚ್‌ಡಿ ಪದವಿ ಪಡೆದಿದ್ದರು.

ತಮ್ಮ ಸಂಶೋಧನೆಗಳ ಮೂಲಕ ಅನೇಕ ನಶಿಸಿ ಹೋಗುತ್ತಿರುವ ಹಾಗೂ ಅಪರೂಪದ ಸ್ಥಳೀಯ ಪ್ರಬೇಧದ ಸಸ್ಯಗಳನ್ನು ಪುನಶ್ಚೇತನಗೊಳಿಸಿ, ರಾಷ್ಟ್ರೀಯ ಹಾಗೂ ಅಂತರ್‌ರಾಷ್ಟ್ರೀಯ ಮಟ್ಟದ ನಿಯತಕಾಲಿಕೆಗಳಲ್ಲಿ ಅನೇಕ ವೈಜ್ಞಾನಿಕ ಲೇಖನಗಳನ್ನು ಪ್ರಕಟಿಸಿದ್ದರು.

2000ರಲ್ಲಿ ಐಎನ್‌ಇಪಿ ಪ್ರಾಯೋಜಿತ ಸಸ್ಯಕಾಶಿಯ ಸ್ಥಾಪನೆಯಿಂದ ಆರಂಭವಾಗಿ, 2011ರಲ್ಲಿ ಕರ್ನಾಟಕ ಜೀವವೈವಿಧ್ಯ ಮಂಡಳಿ ಸಹಾಯದಿಂದ ಪಿಲಿಕುಳದ ಹರ್ಬೇರಿಯಂ ಮತ್ತು ಬೊಟಾನಿಕಲ್ ಮ್ಯೂಸಿಯಂ ಸ್ಥಾಪನೆಗೊಳ್ಳುವವರೆಗೆ ಅವರ ವೃತ್ತಿಪರ ಕಾರ್ಯಕ್ಷೇತ್ರ ಶ್ರೀಮಂತವಾಗಿತ್ತು. ಅವರು ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ಕೇವಲ ಸಂಶೋಧಕನಾಗಿ ಮಾತ್ರವಲ್ಲ, ಅನೇಕ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿದ್ದರು.

ವಿದ್ಯಾರ್ಥಿಗಳು, ಸಂಶೋಧಕರು ಮತ್ತು ಆಯುರ್ವೇದ ವಿದ್ಯಾರ್ಥಿಗಳಿಗಾಗಿ ಪರಿಸರ ಮತ್ತು ಸಸ್ಯ ಸಂರಕ್ಷಣೆಯ ಕುರಿತು ಹಲವು ತರಬೇತಿ ಶಿಬಿರಗಳನ್ನು, ಕಾರ್ಯಾಗಾರಗಳನ್ನು ಅವರು ಆಯೋಜಿಸಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries