ಕಾಸರಗೋಡು: ಮೇಕಿಂಗ್ ಇಂಡಿಯಾ ಮೂಲಕ ಭಾರತವು ಮಹಾನ್ ಮಿಲಿಟರಿ ಶಕ್ತಿಹೊಂದಿದ ದೇಶವಾಗಿ ಮಾರ್ಪಟ್ಟಿದ್ದು, ಇನ್ನು 10 ವರ್ಷಗಳಲ್ಲಿ ಭಾರತವು ವಿಶ್ವದ ನಂಬರ್ ವನ್ ಸೇನಾ ಶಕ್ತಿಯಾಗಿ ಬದಲಾಗಲಿದೆ ಎಂದು ಕರ್ನಲ್ ಪಿ.ದಾಮೋದರನ್ ತಿಳಿಸಿದ್ದಾರೆ.
ಅವರು ಪಾಕಿಸ್ತಾನ ಪ್ರಾಯೋಜಿತ ಮತೀಯ ಮೂಲಭೂತವಾದಿತ್ವವನ್ನು ಸದೆಬಡಿದ ಭಾರತೀಯ ಸೇನೆಗೆ ಅಭಿನಂದನೆ ಸಲ್ಲಿಸಿ ಅಖಿಲ ಭಾರತೀಯ ಪೂರ್ವ ಸೈನಿಕ ಪರಿಷತ್ ಮತ್ತು ದೇಶಭಕ್ತರ ಸಮೂಹ ಕಾಞಂಗಾಡ್‍ನಲ್ಲಿ ಆಯೋಜಿಸಿದ್ದ ತ್ರಿವರ್ಣ ಸ್ವಾಭಿಮಾನ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು. ಪೆಹಲ್ಗಾಂ ಆಕ್ರಮಣದ ಹಿನ್ನೆಲೆಯಲ್ಲಿ ನಡೆದ 'ಆಪರೇಷನ್ ಸಿಂಧೂರ್' ಭಾರತೀಯ ಸೇನಾ ಸಾಮಥ್ರ್ಯವನ್ನು ಪ್ರಪಂಚಕ್ಕೆ ತಿಳಿಸಿಕೊಟ್ಟಿದೆ. ಜತೆಗೆ ಬೆಳೆದು ಬರುವ ಯುವ ಪೀಳಿಗೆಗೆ 'ಇದು ನಮ್ಮ ಸಾಮಥ್ರ್ಯವಂತ ಶಕ್ತಿಶಾಲಿ ಭಾರತ'ಎಂಬ ಆತ್ಮಾಭಿಮಾನ ಮೂಡಿಸಿದೆ. ಪಾಕಿಸ್ತಾನದ ಆಕ್ರಮಣವನ್ನು ಆರಂಭದಲ್ಲೇ ಹೆಡೆಮುರಿ ಕಟ್ಟಿ ಧೂಳೀಪಟ ಗೈಯ್ಯುವ ಮೂಲಕ ಭಾರತದ ಸೇನಾ ಶಕ್ತಿ ವಿಶ್ವಕ್ಕೆ ಅರಿವಾಗಿದೆ. ರಾಷ್ಟ್ರಧ್ವಜ ನಮ್ಮ ಭಾವನೆ. ಕಾಞಂಗಾಡ್ ನಗರದಲ್ಲಿ ಆಯೋಜಿಸಿರುವ ತ್ರಿವರ್ಣ ಸ್ವಾಭಿಮಾನ ಯಾತ್ರೆ ಪ್ರತಿಯೊಬ್ಬರ ಮನದಲ್ಲಿ ಹೆಮ್ಮೆ ಮೂಡಿಸುವಂತಾಗಿದೆ. ಕೇವಲ ಆಯುಧ ನಮ್ಮ ಕೈಯಲ್ಲಿದ್ದರೆ ಸಾಲದು. ಅದನ್ನು ಸಮರ್ಥವಾಗಿ ಬಳಸುವ ಇಚ್ಛಾಶಕ್ತಿಯುಳ್ಳ ಸರ್ಕಾರವೂ ನಮಗಿರಬೇಕು. ಇದನ್ನು ಭಾರತದ ಪ್ರಧಾನಿ ತೋರಿಸಿಕೊಟ್ಟಿರುವುದಾಗಿ ತಿಳಿಸಿದರು.
ಪೂರ್ವ ಸೈನಿಕ ಪರಿಷತ್ ಜಿಲ್ಲಾಧ್ಯಕ್ಷ ರಾಜೀವನ್ ಪಾಲೋಟಿಲ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ರಕ್ಷಾಧಿಕಾರಿ ವಿ.ಜಿ. ಶ್ರೀಕುಮಾರ್ ಮುಖ್ಯ ಭಾಷಣ ಮಾಡಿದರು. ಜಿಲ್ಲಾ ಕಾರ್ಯದರ್ಶಿ ಕೆ.ಪಿ. ರಾಜೀವನ್, ಸೈನಿಕ ಮಾತೃಶಕ್ತಿ ಜಿಲ್ಲಾಧ್ಯಕ್ಷೆ ಸುಜಾತಾ ರಾಜೀವನ್,ಕಾರ್ಯದರ್ಶಿ ಪ್ರಿಯಾ ರಮೇಶನ್, ಬಿಜೆಪಿ ರಾಜ್ಯ ಕಾರ್ಯದರ್ಶಿ ವಕೀಲ ಕೆ. ಶ್ರೀಕಾಂತ್, ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮನುಲಾಲ್ ಮೇಲತ್, ಪಿ.ಆರ್.ಸುನೀಲ್, ಮುಖಂಡರಾದ ಎ.ವೇಲಾಯುಧನ್, ವಿಜಯ್ ಕುಮಾರ್ ರೈ, ಕೆ.ನಾರಾಯಣನ್, ಎಸ್.ಪಿ.ಶಾಜಿ, ಗೋಪಾಲಕೃಷ್ಣನ್ ತಚ್ಚಂಗಾಡ್, ವಕೀಲ ಎ.ಮಣಿಕಂಠನ್, ಪುಷ್ಪಾ ಗೋಪಾಲನ್, ಎಂ.ಬಾಲರಾಜ್, ವಕೀಲ.ವಿ.ಬಾಲಕೃಷ್ಣ ಶೆಟ್ಟಿ ಮೊದಲಾದವರು ಪಾಲ್ಗೊಂಡಿದ್ದರು.
ಹೊಸದುರ್ಗ ನಾರ್ತ್ ಕೋಟಚ್ಚೇರಿಯಿಂದ ಪುದಿಯಕೋಟದವರೆಗೆ ನಡೆದ ತ್ರಿವರ್ಣ ಸ್ವಾಭಿಮಾನ ಯಾತ್ರೆಯಲ್ಲಿ ಮಹಿಳೆಯರ ಸಹಿತ ನೂರಾರು ಮಂದಿ ಪಾಲ್ಗೊಂಡಿದ್ದರು.ಜಿಲ್ಲಾ ಉಪಾಧ್ಯಕ್ಷ ಪಿ. ರಾಜೀವನ್ ಸ್ವಾಗತಿಸಿದರು. ಮೇಲತ್ ತಂಬಾನ್ ನಾಯರ್ ವಂದಿಸಿದರು.





