ಎಲ್ಲರಿಗೂ ಬೆಳಗ್ಗೆ ಯಾವ ತಿಂಡಿ ಮಾಡಬೇಕು ಅನ್ನೋದೆ ಚಿಂತೆ. ಬೆಳಗ್ಗೆ ಎದ್ದ ಕೂಡಲೇ ತಮ್ಮಿಷ್ಟದ ಟಿಫನ್ ಮಾಡಿ ಸವಿಯುವುದು ಸಾಮಾನ್ಯ. ಆದರೆ, ಕಡಿಮೆ ಸಮಯದಲ್ಲಿ ಯಾವ ತಿಂಡಿ ಮಾಡಬೇಕು? ಅನ್ನೋದು ಎಲ್ಲರ ಪ್ರಶ್ನೆ. ನಿಮ್ಮ ಈ ಗೊಂದಲಕ್ಕೆ ಇಲ್ಲಿದೆ ಉತ್ತರ. ಹೌದು, ನೀವು ತ್ವರಿತ ಉಪಹಾರದ ಬಗ್ಗೆ ಚಿಂತಿಸಬೇಕಾಗಿಲ್ಲ. 'ಕ್ಯಾಪ್ಸಿಕಂ ಅಪ್ಪಂ' (Capsicum Appam) ನಿಮಗೆ ಬೆಸ್ಟ್. ಇದು ಬೇಗನೆ ತಯಾರಾಗುತ್ತದೆ. ಬನ್ನಿ, ಈ ಕ್ಯಾಪ್ಸಿಕಂ ಅಪ್ಪಂ ಅನ್ನು ಕಡಿಮೆ ಸಮಯದಲ್ಲಿ ಹೇಗೆ ತಯಾರಿಸಬಹುದು ಎಂಬುದನ್ನು ನೋಡೋಣ.
ದಕ್ಷಿಣ ಭಾರತದ ಆಹಾರ ಯಾರಿಗೆ ಇಷ್ಟವಿಲ್ಲ ಹೇಳಿ. ಇದು ಕೇವಲ ರುಚಿಕರ ಮಾತ್ರವಲ್ಲದೆ, ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿ. ಇದರಲ್ಲಿ ಕಡಿಮೆ ಎಣ್ಣೆ ಮತ್ತು ಕಡಿಮೆ ಮಸಾಲೆಗಳನ್ನು ಬಳಸಲಾಗುತ್ತದೆ. ಮತ್ತು ಇದು ಎಲ್ಲಾ ವರ್ಗದ ಜನರ ಉಪಾಹಾರದ ಮೊದಲ ಆಯ್ಕೆ. ಇದರೊಂದಿಗೆ ತಿನ್ನಬೇಕಾದ ವಸ್ತುಗಳನ್ನು ಸಹ ಬಹಳ ಕಡಿಮೆ ಸಮಯದಲ್ಲಿ ತಯಾರಿಸಲಾಗುತ್ತದೆ. ಅದಕ್ಕಾಗಿಯೇ ಇದು ಜನರಿಗೆ ತುಂಬಾ ಇಷ್ಟವಾಗುತ್ತದೆ. ಈಗ ನೀವು ಈ ಖಾದ್ಯವನ್ನು ತಿನ್ನಲು ದಕ್ಷಿಣ ಭಾರತಕ್ಕೆ ಹೋಗಬೇಕಾ ಎಂದು ಯೋಚಿಸುತ್ತಿರಬಹುದು. ಆದರೆ, ಅದರ ಅಗತ್ಯವಿಲ್ಲ. ಮನೆಯಲ್ಲಿಯೇ ನೀವು 'ಕ್ಯಾಪ್ಸಿಕಂ ಅಪ್ಪಂ' ಮಾಡಬಹುದು.
'ಕ್ಯಾಪ್ಸಿಕಂ ಅಪ್ಪಂ' ತಯಾರಿಸಲು ಬೇಕಾಗುವ ಪದಾರ್ಥಗಳು
ಕ್ಯಾಪ್ಸಿಕಂ (ದೊಣ್ಣೆ ಮೆಣಸಿನಕಾಯಿ) - 1 ಕಪ್ (ಸಣ್ಣಗೆ ಹೆಚ್ಚಿದ್ದು)
ರವೆ - 1 ಕಪ್
ಮೊಸರು - 1 ಕಪ್
ಇನೋ ಅಥವಾ ಅಡುಗೆ ಸೋಡಾ - 1 ಟೀಸ್ಪೂನ್
ಹಸಿ ಮೆಣಸಿನಕಾಯಿ - 2 (ಸಣ್ಣಗೆ ಹೆಚ್ಚಿದ್ದು)
ಈರುಳ್ಳಿ - 1 (ಸಣ್ಣಗೆ ಹೆಚ್ಚಿದ್ದು)
ಸಾಸಿವೆ - 1 ಟೀಸ್ಪೂನ್
ಶುಂಠಿ ಪೇಸ್ಟ್ - ½ ಟೀಸ್ಪೂನ್
2 ಟೀಸ್ಪೂನ್
ಅಡುಗೆ ಎಣ್ಣೆ
ಕೊತ್ತಂಬರಿ ಸೊಪ್ಪು (ಸಣ್ಣಗೆ ಹೆಚ್ಚಿದ್ದು)
ಕ್ಯಾಪ್ಸಿಕಂ ಅಪ್ಪಂ ಮಾಡುವ ವಿಧಾನ
ಈ ಕ್ಯಾಪ್ಸಿಕಂ ಅಪ್ಪಂ ಹೇಗೆ ಮಾಡುವುದು ಎನ್ನುವುದನ್ನು ನೋಡೋಣ. ನೀವು ಮೊದಲು ರವೆಗೆ ಮೊಸರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಬೇಕು. ಇದಾದ ಬಳಿಕ ಅದಕ್ಕೆ ಇನೋ ಅಥವಾ ಅಡುಗೆ ಸೋಡಾ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಏಕೆಂದರೆ, ಮೃದುವಾದ ಕ್ಯಾಪ್ಸಿಕಂ ಅಪ್ಪಂ ಮಾಡಲು ಅದನ್ನು ಚೆನ್ನಾಗಿ ಮಿಶ್ರಣ ಮಾಡುವುದು ಅವಶ್ಯಕ. ಈಗ ಅದಕ್ಕೆ ಕ್ಯಾಪ್ಸಿಕಂ (Capsicum) ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಇದಾದ ಬಳಿಕ, ಈಗಾಗಲೇ ಸಿದ್ಧವಿರುವ ಶುಂಠಿ ಪೇಸ್ಟ್, ಉಪ್ಪು, ಸಾಸಿವೆ ಸೇರಿಸಿ ಮಿಶ್ರಣ ಮಾಡಿ ಮುಚ್ಚಿಡಿ.
ನಂತರ, ಅಪ್ಪಂ ತಯಾರಿಸುವ ಬಾಣಲೆ (ಪ್ಯಾನ್) ಅನ್ನು ಬಿಸಿ ಮಾಡಿ. ಅದಕ್ಕೆ ಅಡುಗೆ ಎಣ್ಣೆ ಹಾಕಿದ ನಂತರ, ಒಂದು ಚಮಚ ತೆಗೆದುಕೊಂಡು, ಈಗಾಗಲೇ ತಯಾರಿಸಲಾದ ಬ್ಯಾಟರ್ ಅನ್ನು ಅದರಲ್ಲಿ ಹಾಕಬೇಕು. ಬಳಿಕ ಎರಡೂ ಬದಿಗಳಲ್ಲಿ ಗೋಲ್ಡ್ ಕಲರ್ ಬರುವವರೆಗೆ ಬೇಯಿಸಿ. ಇಷ್ಟು ಮಾಡಿದರೆ ಬಿಸಿ ಬಿಸಿಯಾದ ಕ್ಯಾಪ್ಸಿಕಂ ಅಪ್ಪಂ ಸವಿಯಲು ಸಿದ್ಧವಾಗುತ್ತದೆ. ನೀವು ಇದನ್ನು ಕೆಂಪು ಚಟ್ನಿ ಅಥವಾ ಸಾಂಬಾರ್ ಜೊತೆಗೆ ತಿನ್ನಬಹುದು.
ಕ್ಯಾಪ್ಸಿಕಂ ಸೇವನೆಯಿಂದ ದೊಡ್ಡ ಕಾಯಿಲೆಗಳು ದೂರ!
ಕ್ಯಾಪ್ಸಿಕಂ ( ದಪ್ಪ ಮೆಣಸಿನ ಕಾಯಿ) ತನ್ನಲ್ಲಿ ಅಗಾಧ ಪ್ರಮಾಣದ ವಿಟಮಿನ್ ಸಿ ಅಂಶ ಒಳಗೊಂಡಿದೆ. ವಿವಿಧ ತರಕಾರಿಗಳ ಜೊತೆಗೆ, ಅಡುಗೆಗಳಲ್ಲಿ ಬಳಸುವುದರಿಂದ, ಅಡುಗೆಯ ರುಚಿ ಹೆಚ್ಚಾಗುತ್ತದೆ. ಮಾತ್ರವಲ್ಲದೆ, ದೊಡ್ಡ ಕಾಯಿಲೆಗಳು ದೂರವಾಗುತ್ತವೆ. ಕ್ಯಾಪ್ಸಿಕಂ ಅನ್ನು ದಿನನಿತ್ಯ ಅಡುಗೆಯಲ್ಲಿ ಬಳಸುವುದರಿಂದ ಮಧಮೇಹ, ಸಂಧಿವಾತ ಹಾಗೂ ಹೃದಯಕ್ಕೆ ಸಂಬಂಧಪಟ್ಟ ದೀರ್ಘಕಾಲದ ಕಾಯಿಲೆ ಮಾಯವಾಗುತ್ತವೆ. ಅಧಿಕ ರಕ್ತದೊತ್ತಡ, ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಇರುವವರು ಕ್ಯಾಪ್ಸಿಕಂ ಸೇವಿಸುವುದು ಉತ್ತಮ.



